ಮೋದಿ ಪ್ರಧಾನಿಯಾದ ನಂತ್ರ ದೇಶ ಅಭಿವೃದ್ಧಿ ಕಾಣುತ್ತಿದೆ : ಈಶ್ವರಪ್ಪ
ಶಿವಮೊಗ್ಗ : ಮೋದಿ ದೇಶದ ಪ್ರಧಾನಿ ಆದ ನಂತರ ರಾಷ್ಟ್ರದಲ್ಲಿ ಅಭಿವೃದ್ಧಿ ಕೆಲಸಗಳು ಸ್ವಾಭಾವಿಕವಾಗಿ ಆಗುತ್ತಿವೆ. ಎಂದೂ ಕಾಣದ ರಸ್ತೆಗಳು, ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ವಿದೇಶಗಳು ಮೆಚ್ಚುವ ರೀತಿಯಲ್ಲಿ ಮೋದಿಯವರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ನೂತನ ಕೃಷಿ ಕಾಯ್ದೆ ಸತ್ಯ-ಮಿಥ್ಯ ವಿಚಾರ ಸಂಚಿರಣದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಈ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎನ್ನುವ ಕಾರಣಕ್ಕೆ ಬಿಜೆಪಿಯೇತರ ಪಕ್ಷಗಳು ವಿರೋಧ ಮಾಡುತ್ತಿವೆ.
ಕೃಷಿ ಕಾಯ್ದೆ ಜಾರಿಗೊಳಿಸಿದ ನಂತರ ಕಾಯ್ದೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿಯೇತರ ಪಕ್ಷಗಳು ಮಾಡಲಿಲ್ಲ. ನಾವು ಏನೇ ಮಾಡಿದರೂ ಅದನ್ನು ವಿರೋಧ ಮಾಡುವ ಸಲುವಾಗಿಯೇ ದೊಡ್ಡ ಗುಂಪು ಇದೆ. ಹೀಗಾಗಿಯೇ ನಮ್ಮ ಕಾರ್ಯಕರ್ತರು ಸಹ ನೂತನ ಕಾಯ್ದೆಯನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ವಿರೋಧಿಗಳಿಗೆ ಉತ್ತರ ಕೊಡಲು ಸಾಧ್ಯ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಇನ್ನು ಕಾಂಗ್ರೆಸ್ ನವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ವಿರೋಧ ಮಾಡಿದರು. ಆದರೆ ಈಗ ಅವರು ರಾಮ ಮಂದಿರ ನಿರ್ಮಾಣ ಬೇಡ ಅನ್ನುತ್ತಿಲ್ಲ. ಬದಲಿಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಹಣದ ಲೆಕ್ಕ ಕೊಡಿ ಎನ್ನುತ್ತಾರೆ. ಈ ಮೂಲಕ ಕಾಂಗ್ರೆಸ್ ಒಂದು ರೀತಿಯ ಪಲಾಯನ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.









