ಕೊರೊನಾ ಅನಾಹುತಕ್ಕೆ ಮೋದಿಯೇ ಕಾರಣ : ಎಂ.ಬಿ.ಪಾಟೀಲ್
ಹಾವೇರಿ : ಕೊರೊನಾ ಅನಾಹುತಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣ ವಿಷಯದಲ್ಲಿ ತಜ್ಞರ ವರದಿ ಮತ್ತು ವೈಜ್ಞಾನಿಕ ಕ್ರಮಗಳನ್ನು ಪಾಲಿಸಲೇ ಇಲ್ಲ.
ಸಕಾಲದಲ್ಲಿ ಆಕ್ಸಿಜನ್ ಬೆಡ್ ಮತ್ತು ಚಿಕಿತ್ಸೆ ಸಿಗದೆ ದೇಶದಲ್ಲಿ ಲಕ್ಷಾಂತರ ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ಈ ಕೊರೊನಾ ಅನಾಹುತಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ.
ಮೋದಿ ಅವರ ಯಡವಟ್ಟು ನೀತಿ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಲಸಿಕೆ ನೀಡುವಾಗ ಚುನಾವಣೆಗಳಿದ್ದ ರಾಜ್ಯಗಳಿಗೆ ಮೊದಲ ಆದ್ಯತೆ ನೀಡಿದರು. ದೇಶದಲ್ಲಿ ಲಸಿಕೆಗೆ ತೀವ್ರ ಕೊರತೆಯಿದ್ದರೂ, ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಮೋದಿ ಅವರು ‘ವಿಶ್ವಗುರು’ ಎನಿಸಿಕೊಳ್ಳಲು ಹೊರಟರು’ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದ ಎಂ.ಬಿ.ಪಾಟೀಲ್, ‘ಪಿ.ಎಂ ಕೇರ್ಸ್ ಫಂಡ್’ ಬಗ್ಗೆ ಲೆಕ್ಕ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ಎಲ್ಲಿಂದ ಹಣ ಹರಿದುಬಂತು ಮತ್ತು ಯಾವ ಕಾರಣಕ್ಕೆ ಖರ್ಚಾಯಿತು ಎಂಬ ಲೆಕ್ಕವನ್ನೇ ನೀಡದೆ ‘ಸಂವಿಧಾನ ವಿರೋಧಿ ನೀತಿ’ಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ.
ಕೊರೊನಾ ಬರುವ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗ ಕೊರೊನಾದಿಂದ ಆರ್ಥಿಕ ಹಿಂಜರಿತವಾಗಿದೆ ಎಂದು ತಮ್ಮ ಆಡಳಿತ ವೈಫಲ್ಯವನ್ನು ಪ್ರಧಾನಿ ಮುಚ್ಚಿಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.









