Narendra Modi | ನಾವು ಯುದ್ಧದ ವಿರುದ್ಧವಾಗಿದ್ದೇವೆ
ನವದೆಹಲಿ : ನಾವು ಯುದ್ಧದ ವಿರುದ್ಧವಾಗಿದ್ದೇವೆ, ಆದ್ರೆ ಶಕ್ತಿಯಿಲ್ಲದೇ ಶಾಂತಿ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಯೋಧರೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದಲೂ ಅಂದರೇ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿ ವರ್ಷದ ದೀಪಾವಳಿ ಆಚರಣೆಗೆ ವಿವಿಧ ಮಿಲಿಟರಿ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಇಂದು ಕೂಡ ಪ್ರಧಾನಿ ಕಾರ್ಗಿಲ್ ಯುದ್ಧಭೂಮಿಗೆ ತೆರಳಿ ಸೈನಿಕರಿಂದ ದೀಪಾವಳಿ ಆಚರಣೆ ಮಾಡಿದ್ದಾರೆ.
ಬಳಿಕ ಕಾರ್ಗಿಲ್ ನಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ “ ನಮ್ಮ ಸೇನೆಯ ಭಯೋತ್ಪಾದನೆ ಹತ್ತಿಕ್ಕಿದೆ. ಜನರ ರಕ್ಷಣೆಗಾಗಿ ಸದಾ ಹೋರಾಡುತ್ತಾ ನಂಬಿಕೆ ಮತ್ತು ಪ್ರೀತಿಯನ್ನು ಗಳಿಸಿದೆ. ಇಲ್ಲಿಯವರೆಗೆ ದೇಶವು ಆಚರಿಸಿದ ವಿಜಯದ ದೀಪಾವಳಿಯನ್ನು ನೆನಪಿಸಿಕೊಳ್ಳಿ ಎಂದರು.

ಇನ್ನು ನಾವು ಎಂದಿಗೂ ಯುದ್ಧವನ್ನು ಮೊದಲ ಆಯ್ಕೆಯಾಗಿ ನೋಡಿಲ್ಲ. ನಾವು ಯುದ್ಧದ ವಿರುದ್ಧವಾಗಿದ್ದೇವೆ, ಆದರೆ ಶಕ್ತಿಯಿಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ. ಯಾರಾದರೂ ನಮ್ಮನ್ನು ಕೆಟ್ಟ ಕಣ್ಣುಗಳಿಂದ ನೋಡಲು ಧೈರ್ಯ ಮಾಡಿದರೆ, ನಮ್ಮ ಸಶಸ್ತ್ರ ಪಡೆಗಳು ತಕ್ಕ ಉತ್ತರವನ್ನು ನೀಡುತ್ತವೆ ಎಂದು ವೈರಿ ರಾಷ್ಟ್ರಗಳಿಗೆ ಮೋದಿ ಎಚ್ಚರಿಕೆ ನೀಡಿದ್ದಾರೆ.
ಭಾರತ ಪ್ರತಿಯೊಂದು ಹಬ್ಬವನ್ನು ಎಲ್ಲರನ್ನೊಳಗೊಂಡು ಆಚರಿಸುತ್ತದೆ. ಭಾರತೀಯ ಸೇನಾ ಸಿಬ್ಬಂದಿಯೇ ತನ್ನ ಕುಟುಂಬ ಸದಸ್ಯರಂತಿದ್ದು, ಕಾರ್ಗಿಲ್ ನಲ್ಲಿ ಭಾರತೀಯ ಯೋಧರು ಆತಂಕವಾದಿಗಳ ಹುಟ್ಟು ಅಡಗಿಸಿದ್ದಾರೆ. ಇಡೀ ದೇಶದ ಜನ ನೆಮ್ಮದಿಯಿಂದ ನೆಲಸಲು ಯೋಧರ ಪಾತ್ರ ಪ್ರಮುಖವಾಗಿದೆ. ದೇಶದ ಗಡಿ, ಆರ್ಥಿಕ ಸ್ಥಿತಿ ಸುಧಾರಿಸಿದರೆ ದೇಶ ಸುಧಾರಿಸುತ್ತದೆ ಎಂದು ತಿಳಿಸಿದರು.








