ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ : ಅಂಗಾಂಗ ದಾನ ಮಾಡಲು ಮುಂದಾದ ಕುಟುಂಬಸ್ಥರು
ಬೆಂಗಳೂರು : ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ಸಂಚಾರಿ ವಿಜಯ್ ಆರೋಗ್ಯ ಪರಿಸ್ಥಿತಿ ಸುಧಾರಿಸಲಾಗದ ಹಂತ ತಲುಪಿದೆ. ಭೌತಿಕವಾಗಿ ಇನ್ನೂ ಇದ್ದಾರಾದರೂ ಚೇತರಿಕೆ ಅಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ವಿಜಯ್ ಕುಟುಂಬಸ್ಥರು ಸಹ ಸಂಚಾರಿ ವಿಜಯ್ ಅಂಗಾಂಗಗಳನ್ನು ದಾನ ಮಾಡಲಾಗುವುದು. ಇದರಿಂದ ಅವರಿಗೆ ಶಾಂತಿ ಸಿಗಲಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಶನಿವಾರ ರಾತ್ರಿ ಗೆಳೆಯ ನವೀನ್ ಜೊತೆಗೆ ಬೈಕ್ ನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಪಘಾತಗೊಂಡಿದ್ದರು. ತಲೆಯ ಎಡಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು, ರಕ್ತಸ್ರಾವ ಕೂಡ ಆಗಿತ್ತು. ಕೂಡಲೇ ಅವರನ್ನು ನಟ ಸುದೀಪ್ ಮನವಿ ಮೇರೆಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಸರಿ ಮಾಡಲಾಗಿತ್ತು.
ಐಸಿಯುನಲ್ಲಿ ಇಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ, ಬ್ರೈನ್ ಸ್ಟ್ರೋಕ್ ಉಂಟಾಗಿ, ಅವರು ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು. ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿಯೂ ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್ ಮಾಹಿತಿ ನೀಡಿದ್ದರು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.








