ನ್ಯಾಷನಲ್ ಹೆರಾಲ್ಡ್ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣವು ತೀವ್ರ ತಿರುವು ಪಡೆದಿದೆ. ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ಇದು 2013ರ ಹಣ ಅಕ್ರಮ ವರ್ಗಾವಣೆ ತಡೆ ನಿಯಮಗಳ ನಿಯಮ 5 ಮತ್ತು PMLA (Prevention of Money Laundering Act), 2002ರ ಸೆಕ್ಷನ್ 8 ಅಡಿಯಲ್ಲಿ ಕೈಗೊಂಡ ಕ್ರಮವಾಗಿದ್ದು, ನ್ಯಾಯನಿರ್ಣಯ ಪ್ರಾಧಿಕಾರವು ಈ ಮುಟ್ಟುಗೋಲನ್ನು 2024ರ ಏಪ್ರಿಲ್ 10ರಂದು ದೃಢಪಡಿಸಿದೆ. ಈ ಬೆನ್ನಲ್ಲೇ, 2025ರ ಏಪ್ರಿಲ್ 11ರಂದು ಎಜಿಎಲ್ (Associated Journals Limited) ನ ಆಸ್ತಿಗಳಿರುವ ದೆಹಲಿ, ಮುಂಬೈ ಮತ್ತು ಲಕ್ನೋ ಸ್ಥಳಗಳ ಆಸ್ತಿ ನೋಂದಣಿದಾರರಿಗೆ ED ನೋಟಿಸ್ಗಳನ್ನು ನೀಡಿದೆ.
ಈ ಆಸ್ತಿಗಳು ಯಂಗ್ ಇಂಡಿಯನ್ ಎಂಬ ಕಂಪನಿಯ ಮೂಲಕ ಸೋನಿಯಾ ಮತ್ತು ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರ ಪಾಲಿಗೆ ಬಂದುದಾಗಿ ತಿಳಿದುಬಂದಿದೆ. ವಿಶೇಷವೆಂದರೆ, ಮುಂಬೈನ ಬಾಂದ್ರಾ (ಪೂರ್ವ)ದಲ್ಲಿರುವ ಹೆರಾಲ್ಡ್ ಹೌಸ್ನ ಮೂರು ಮಹಡಿಗಳೂ ಈ ಪ್ರಕರಣದ ಭಾಗವಾಗಿದ್ದು, ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್ಸ್ ಲಿಮಿಟೆಡ್ಗೆ ಈ ಕುರಿತು ನೋಟಿಸ್ ನೀಡಲಾಗಿದೆ. ಈಗಿನಿಂದ ಈ ಕಂಪನಿಯು ಬಾಡಿಗೆ ಮೊತ್ತಗಳನ್ನು ನೇರವಾಗಿ ED ಗೆ ಠೇವಣಿ ಇಡಬೇಕೆಂದು ಸೂಚಿಸಲಾಗಿದೆ.
ಇಡೀ ಪ್ರಕರಣದ ಹಿಂದಿನ ಹಿನ್ನೆಲೆ 2014ರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನಲ್ಲಿ ದೊರಕಿದ್ದು, ಈ ದೂರಿನ ಆಧಾರದ ಮೇಲೆ 2021ರಲ್ಲಿ ED ತನಿಖೆಯನ್ನು ಪ್ರಾರಂಭಿಸಿತು. ದೂರಿನಲ್ಲಿ, ಕ್ರಿಮಿನಲ್ ಪಿತೂರಿ ಮೂಲಕ ಎಜಿಎಲ್ನ 2,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಯಂಗ್ ಇಂಡಿಯನ್ ಮೂಲಕ ಕೇವಲ 50 ಲಕ್ಷ ರೂ.ಗೆ ಕಬಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಇದೀಗ ED ತನಿಖೆಯಿಂದ ಬಹಿರಂಗವಾದಂತೆ, 988 ಕೋಟಿ ರೂ.ಗಳ ಕ್ರಿಮಿನಲ್ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಕಂಡುಬಂದಿದೆ. ಇದರಲ್ಲಿ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳ ಜೊತೆಗೆ, 90.2 ಕೋಟಿ ರೂ. ಮೌಲ್ಯದ ಎಜಿಎಲ್ ಷೇರುಗಳೂ ಸೇರಿವೆ. ಈ ಆಸ್ತಿಗಳನ್ನು ಮೊದಲಿಗೆ 2023ರ ನವೆಂಬರ್ 20ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು.
ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ನಾಯಕರಿಗೆ ಕಾನೂನು ಸಂಕಷ್ಟವನ್ನು ತರುವಂತಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಹಿನ್ನಲೆಗೂ ದೊಡ್ಡ ಪರಿಣಾಮ ಬೀರುತ್ತದೆಯೆಂಬ ನಿರೀಕ್ಷೆಯಿದೆ.