ರಾಷ್ಟ್ರೀಯ ಕ್ರೀಡಾ ದಿನ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ನೆನಪು…!
ಆಗಸ್ಟ್ 29… ರಾಷ್ಟ್ರೀಯ ಕ್ರೀಡಾ ದಿನ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಾಂದ್ ಅವರ ಹುಟ್ಟಿದ್ದ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದೆ. 1905ರಲ್ಲಿ ಅಲಹಬಾದ್ ನಲ್ಲಿ ಹುಟ್ಟಿದ್ದ ಧ್ಯಾನ್ ಚಾಂದ್ ಹೆಚ್ಚು ಓದಿದವರಲ್ಲ. ತನ್ನ 17ರ ಹರೆಯದಲ್ಲೇ ಭಾರತೀಯ ಸೇನೆ ಸೇರಿಕೊಂಡಿದ್ದರು. ಹಾಕಿ ಆಟದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದ ಧ್ಯಾನ್ ಚಾಂದ್ ಅವರಿಗೆ ಸುಬೇದಾರ್ ಮೇಜರ್ ತಿವಾರಿ ಬೆಂಬಲ ನೀಡಿದ್ರು. ಅಲ್ಲದೆ ತಿವಾರಿ ಅವರ ಮಾರ್ಗದರ್ಶನದಲ್ಲಿ ಹಾಕಿ ಆಟವನ್ನು ಆಡಲು ಶುರು ಮಾಡಿದ್ದರು.
ಹಾಕಿ ಆಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ಧ್ಯಾನ್ ಚಾಂದ್ ಅವರಿಗೆ ಸೇನೆಯಲ್ಲಿ ವಿವಿಧ ಹುದ್ದೆಗಳು ಒಲಿದು ಬಂದಿದ್ದವು. ಸೈನಿಕನಾಗಿ ಸೇನೆ ಸೇರಿಕೊಂಡ ಧ್ಯಾನ್ ಚಾಂದ್ ಅವರು ನಾಯಕ, ಸುಬೇದಾರ್ ನಂತರ ಲೆಫ್ಟಿನೆಂಟ್ ಹಾಗೂ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ 1936ರಲ್ಲಿ ಧ್ಯಾನ್ ಚಾಂದ್ ಅವರು ಭಾರತ ಹಾಕಿ ತಂಡದ ನಾಯಕನಾಗಿದ್ದರು.
ನಾವು ಧ್ಯಾನ್ ಚಾಂದ್ ಅವರ ಆಟವನ್ನು ನೋಡಿಲ್ಲ. ನೋಡಿದ್ದವರು ಅವರ ಆಟವನ್ನು ಬಣ್ಣಿಸುತ್ತಿರುವ ರೀತಿಯೇ ರೋಮಾಂಚನಗೊಳಿಸುತ್ತಿದ್ದವು. ಒಂದು ಬಾರಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನೊಳಗಡೆ ಚೆಂಡು ಸಿಲುಕಿಕೊಂಡ್ರೆ ಸಾಕು… ಎದುರಾಳಿ ತಂಡದ ಆಟಗಾರರು ಎಷ್ಟೇ ಸಾಹಸ ಪಟ್ಟರೂ ಚೆಂಡನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಕಿ ಸ್ಟಿಕ್ ನಲ್ಲೇ ಬುಗರಿಯಂತೆ ಚೆಂಡನ್ನು ತಿರುಗಿಸಿಕೊಂಡು ಹೋಗುತ್ತಿದ್ದ ಧ್ಯಾನ್ ಚಾಂದ್ ಗೋಲು ದಾಖಲಿಸಿದ್ದ ನಂತರವೇ ಚೆಂಡಿಗೆ ವಿರಾಮ ಸಿಗುತ್ತಿತ್ತು. ಅಷ್ಟರ ಮಟ್ಟಿಗೆ ಧ್ಯಾನ್ ಚಾಂದ್ ಹಾಕಿ ಆಟವನ್ನು ಕರಗತ ಮಾಡಿಕೊಂಡಿದ್ದರು. ಹೀಗಾಗಿ ಧ್ಯಾನ್ ಚಾಂದ್ ಅವರ ಹಾಕಿ ಸ್ಟಿಕ್ ನಲ್ಲಿ ಮ್ಯಾಗ್ನೇಟ್ ಇದೆಯೋ ಅಂತ ಪರೀಕ್ಷೆ ಕೂಡ ಮಾಡಲಾಗುತ್ತಿತ್ತು. ಆ ರೀತಿಯ ಚಮತ್ಕಾರಿಯ ಆಟವನ್ನು ಆಡುತ್ತಿದ್ದರು ಧ್ಯಾನ್ ಚಾಂದ್.
1922ರಿಂದ 1948ರವರೆಗೆ ಹಾಕಿ ಆಟದಲ್ಲಿ ಜಾದು ಮಾಡುತ್ತಿದ್ದ ಧ್ಯಾನ್ ಚಾಂದ್ ಅವರು 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಗೋಲುಗಳನ್ನು ದಾಖಲಿಸಿದ್ದರು. ಒಟ್ಟಾರೆ ತನ್ನ ಹಾಕಿ ಆಟದ ಬದುಕಿನಲ್ಲಿ ಧ್ಯಾನ್ ಚಾಂದ್ ಅವರು ಸುಮಾರು ಒಂದು ಸಾವಿರ ಗೋಲು ದಾಖಲಿಸಿದ್ದಾರೆ. ಹೀಗೆ ಧ್ಯಾನ್ ಚಾಂದ್ ಅವರ ಅದ್ಭುತ ಆಟ ಮತ್ತು ಬದ್ಧತೆ, ದೇಶ ಪ್ರೇಮಕ್ಕೆ 2012ರಿಂದ ಭಾರತ ಸರ್ಕಾರ ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಿದೆ. ಇದಕ್ಕೂ ಮೊದಲು ಧ್ಯಾನ್ ಅವರಿಗೆ 1956ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ರಾಷ್ಟ್ರೀಯ ಕ್ರೀಡಾ ದಿನದಂದು ಭಾರತದ ಶ್ರೇಷ್ಠ ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಜೊತೆಗೆ ಧ್ಯಾನ್ ಚಾಂದ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಹಿಂದೆಯೇ ಮೇಜರ್ ಧ್ಯಾನ್ ಚಾಂದ್ ಅವರ ಕ್ರೀಡಾ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಕೇಳಿಬರುತ್ತಿದೆ. ಆದ್ರೆ ಭಾರತ ಸರ್ಕಾರ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಮನಸ್ಸು ಮಾಡಲಿಲ್ಲ. ಅದ್ರಲ್ಲೂ ಭಾರತ ರತ್ನ ಪ್ರಶಸ್ತಿ ಯ ನಿಯಮಗಳನ್ನು ಬದಿಗೊತ್ತಿ ಸಚಿನ್ ತೆಂಡುಲ್ಕರ್ ಗೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಧ್ಯಾನ್ ಚಾಂದ್ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಇಂದಿಗೂ ನಡೆಯುತ್ತಿದೆ.
ಅದೇನೇ ಇರಲಿ, ಧ್ಯಾನ್ ಚಾಂದ್ ಅವರನ್ನು ವರ್ಷಕ್ಕೊಂದು ಬಾರಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಒಲಿಂಪಿಕ್ ಚಾಂಪಿಯನ್ ಆಗಿದ್ದ ಧ್ಯಾನ್ ಚಾಂದ್ ಅವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಕೂಡ ಮನ ಸೋತಿದ್ರು. ಧ್ಯಾನ್ ಚಾಂದ್ ಅವರ ಆಟವನ್ನು ನೋಡಿ ಬೆರಗುಗೊಂಡಿದ್ದ ಹಿಟ್ಲರ್ ಸೇನೆಯಲ್ಲಿ ಉನ್ನತ ಹುದ್ದೆ ನೀಡುವ ಆಶ್ವಾಸನೆ ನೀಡಿದ್ದರು. ಆದ್ರೆ ಧ್ಯಾನ್ ಚಾಂದ್ ಹಿಟ್ಲರ್ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದ್ದರು. ಹೀಗೆ ಧ್ಯಾನ್ ಚಾಂದ್ ಅವರ ಬದುಕಿನ ಅನೇಕ ಘಟನೆಗಳು ಯುವ ಕ್ರೀಡಾಪಟುಗಳಿಗೆ ದಾರಿ ದೀಪವಾಗಿದೆ.