ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಚುನಾವಣೆಗೂ ಮುನ್ನವೇ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ಕುರಿತು ತಾತ್ಕಾಲಿಕ ಯೋಜನೆಗಳನ್ನು ರೂಪಿಸಿದೆ.
ಎನ್‌ಡಿಎ (NDA) ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜೂನ್ 9ರಂದು ಭಾನುವಾರ ಪ್ರಮಾಣ ವಚನ (Oath Ceremony) ಸ್ವೀಕರಿಸುವ ಸಾಧ್ಯತೆಯಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ತಾತ್ಕಾಲಿಕ ಯೋಜನೆ ರೂಪಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬೀಳವಿದೆ. 2014 ರಲ್ಲಿ ಎನ್‌ಡಿಎ ಸರ್ಕಾರವು ಮೇ 26 ಸೋಮವಾರ ಪ್ರಮಾಣ ವಚನ ಸ್ವೀಕರಿಸಿತ್ತು. ಆಗ ಫಲಿತಾಂಶ ಮೇ 16 ರಂದು ಪ್ರಕಟವಾಗಿತ್ತು. 2019 ರಲ್ಲಿ ಎನ್‌ಡಿಎ ಸರ್ಕಾರವು ಮೇ 30 ಗುರುವಾರ ಪ್ರಮಾಣ ವಚನ ಸ್ವೀಕರಿಸಿತ್ತು. ಆ ವರ್ಷ ಫಲಿತಾಂಶ ಮೇ 23 ರಂದು ಪ್ರಕಟವಾಗಿತ್ತು. ಈ ಬಾರಿಯೂ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಎನ್ ಡಿಎ ಪ್ರಮಾಮ ವಚನದ ರೂಪರೇಷೆ ಕೈಗೊಂಡಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಅತಿಥಿಗಳನ್ನು ಆಹ್ವಾನಿಸಲು ಎನ್ ಡಿಎ ತಯಾರಿ ನಡೆಸಿದೆ. ಕರ್ತವ್ಯ ಪಥ್‌ನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಮೇ 24 ರಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ವಿಭಾಗದಲ್ಲಿ ಪ್ರಮಾಣ ವಚನ ಸಮಾರಂಭದ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸ್ಥಳದ ಕುರಿತು ಚರ್ಚೆ ಆಗಿಲ್ಲ. ಆದರೆ, ಹೆಚ್ಚಿನ ಜನರು ಕುಳಿತುಕೊಳ್ಳುವ ಸ್ಥಳವನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನೇರ ಪ್ರಸಾರ ಮಾಡಲು 100 ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಜೂನ್ 4 ರ ನಂತರ ಸುಮಾರು ಮೂರ್ನಾಲ್ಕು ದಿನಗಳಲ್ಲಿ ಸಮಾರಂಭಕ್ಕೆ ಪೂರ್ಣ ತಯಾರಿ ನಡೆಸುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.