ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ…
ಟೋಕಿಯೊ ಒಲಿಂಪಿಕ್ಸ್ನ ಚಿನ್ನದ ಹುಡುಗ, ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಫಿನ್ಲ್ಯಾಂಡ್ನಲ್ಲಿ ನಡೆಯುತ್ತಿರುವ ಕುರ್ಟೇನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 86.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನ ಗೆದ್ದಿದ್ದಾರೆ.
ಮೊದಲ ಎಸೆತದಲ್ಲಿಯೇ ನೀರಜ್ 86.89 ಮೀಟರ್ ದೂರಕ್ಕೆ ಭರ್ಚಿ ಎಸೆದಿದ್ದರು. ಬೇರೆ ಯಾವ ಆಟಗಾರರೂ ಅದರ ಸಮೀಪಕ್ಕೆ ತಲುಪಲು ಸಾಧ್ಯವಾಗಿಲ್ಲ. ನೀರಜ್ ಅವರು ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಂತರ ನೀರಜ್ ಚೋಪ್ರಾಗೆ ಇದು ಮೊದಲ ಚಿನ್ನದ ಪದಕವಾಗಿದೆ. ಮಳೆಯಿಂದಾಗಿ ಮೈದಾನದಲ್ಲಿ ಸಾಕಷ್ಟು ನೀರು ನಿಂತಿದ್ದು ಕಠಿಣ ಪರಿಸ್ಥಿತಿಯ ನಡುವೆಯೂ ಚಿನ್ನ ಗೆದ್ದಿದ್ದಾರೆ. ಮೂರನೇ ಪ್ರಯತ್ನದ ಎಸೆದ ವೇಳೆ ಕಾಲು ಜಾರಿ ಬಿದ್ದಿದ್ದರು ಲೈನ್ನಿಂದ ಹೊರಗೆ ದಾಟಿದ್ದರಿಂದ ಆ ಎಸೆತವನ್ನ ಗಣನೆಗೆ ತೆಗೆದುಕೊಳ್ಳಲಿಲ್ಲ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನೀರಜ್ ಚೋಪ್ರಾ ಅವರ ವೀಡಿಯೊವನ್ನು ಟ್ವೀಟ್ ಮಾಡಿ ನೀರಜ್ ಅವರಿಗೆ ಚಿನ್ನ ಸಿಕ್ಕಿದೆ, ಅವರು ಅದನ್ನು ಮತ್ತೆ ಸಾಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈಗ ನೀರಜ್ ಮುಂದಿನ ಗುರಿ ವಿಶ್ವ ಚಾಂಪಿಯನ್ಶಿಪ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲುವುದು. ವಿಶ್ವ ಚಾಂಪಿಯನ್ಶಿಪ್ ಜುಲೈ 15 ರಿಂದ 24 ರವರೆಗೆ ಯುಎಸ್ನಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟವು ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನಂತರ ನೀರಜ್, ದೇಶಕ್ಕಾಗಿ ಕಾಮನ್ವೆಲ್ತ್ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.