ನೇಪಾಳದಲ್ಲಿ ಮಳೆಯಿಂದ ಉಂಟಾದ ಭೂಕುಸಿತಕ್ಕೆ 30ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಹಾಗೂ ಅನೇಕ ಜನರು ಕಾಣೆಯಾಗಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ಒಟ್ಟು 215 ಜನರು ಸಾವನ್ನಪ್ಪಿದ್ದಾರೆ ಮತ್ತು 85 ಮಂದಿ ಕಾಣೆಯಾಗಿದ್ದಾರೆ.
ಕಠ್ಮಂಡ್, ಅಗಸ್ಟ್ 15: ನೇಪಾಳದಲ್ಲಿ ಶುಕ್ರವಾರ ಭಾರಿ ಮಳೆಯಿಂದ ಉಂಟಾದ ಭೂಕುಸಿತಕ್ಕೆ 30ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಹಾಗೂ ಅನೇಕ ಜನರು ಕಾಣೆಯಾಗಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್-ಸೆಪ್ಟೆಂಬರ್ ಮಳೆಗಾಲದಲ್ಲಿ ನೇಪಾಳವು ಪ್ರವಾಹ ಮತ್ತು ಭೂಕುಸಿತದಿಂದ ಬಳಲುತ್ತಿದ್ದು, ಇದರ ಪರಿಣಾಮವಾಗಿ ಪ್ರತಿವರ್ಷ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ.
ರಾಜಧಾನಿ ಕಠ್ಮಂಡು ಬಳಿಯ ಸಿಂಧುಪಾಲ್‌ಶೋಕ್‌ನಲ್ಲಿ ಶುಕ್ರವಾರ ಮುಂಜಾನೆ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 28 ಜನರು ಕಾಣೆಯಾಗಿದ್ದಾರೆ ಎಂದು ಸಚಿವಾಲಯದ ಅಧಿಕಾರಿ ಮುರಾರಿ ವಸ್ತಿ ತಿಳಿಸಿದ್ದಾರೆ.
ಬೆಟ್ಟಗಳಿಂದ ನಿರಂತರ ಮಳೆ ನೀರು ಮತ್ತು ಮಣ್ಣು ಬೀಳುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ವಸ್ತಿ ರಾಯಿಟರ್ಸ್ ಗೆ ತಿಳಿಸಿದರು. ಪಶ್ಚಿಮ ನೇಪಾಳದ ಕಾಲಿಕೊಟ್‌ನಲ್ಲಿ 10 ರಿಂದ 19 ವರ್ಷದೊಳಗಿನ ಆರು ಜನರು ಮೃತಪಟ್ಟಿದ್ದು, ಅವರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ಒಟ್ಟು 215 ಜನರು ಸಾವನ್ನಪ್ಪಿದ್ದಾರೆ ಮತ್ತು 85 ಮಂದಿ ಕಾಣೆಯಾಗಿದ್ದಾರೆ. ನೇಪಾಳ ರೆಡ್‌ಕ್ರಾಸ್ ಸೊಸೈಟಿಯ ದಿಬ್ಯಾ ರಾಜ್ ಪೌಡೆಲ್, 40,000 ಜನರನ್ನು ತಾತ್ಕಾಲಿಕ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು








