ತಿರುವನಂತಪುರಂ : ಪುಟ್ಟ ಮಗನೆದುರೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಸಿಗರೇಟ್ ಬೆಂಕಿಯಿಂದ ಸುಟ್ಟು, ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ವರ್ತಿಸಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಕೇರಳದ ತಿರುವನಂತಪುರಂನ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಪ್ರಕರಣದ ಕುರಿತು ಸಂತ್ರಸ್ತ ಮಹಿಳೆ ನೀಡಿದ ಹೇಳಿಕೆ ಪುಣ್ಯಕೋಟಿಯ ಕಥೆಯನ್ನು ನೆನಪಿಸುತ್ತಿದೆ.
ಸಂತ್ರಸ್ತೆ ಹೇಳಿದ್ದೇನು?
ನನ್ನನ್ನು ವಾಹನದಲ್ಲಿ ಎಳೆದು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನಂತರ ವಿಪರೀತವಾಗಿ ಥಳಿಸಿದರು ನಾನು ಪ್ರಜ್ಞಾಹೀನಳಾದೆ. ನಂತರ ನನ್ನ ಮಗುವಿನ ಅಳು ಶಬ್ದ ಕೇಳಿ ಪ್ರಜ್ಞೆ ಬಂದಿತು. ನಾನು ಎಚ್ಚರಗೊಂಡಾಗ ನನ್ನ ಬಟ್ಟೆ ಇರಲಿಲ್ಲ ಕೇವಲ ಟಾಪ್ ಮಾತ್ರ ಇತ್ತು. ಮಗ ಅಳುತ್ತಿದ್ದ, ನನ್ನ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಮನವಿ ಮಾಡಿದೆ. ಅಲ್ಲದೆ ನನ್ನ ಮಗನನ್ನು ಮನೆಗೆ ಬಿಟ್ಟು ಖಂಡಿತ ಮರಳಿ ಬರುತ್ತೇನೆ ಎಂದು ಮಾತು ಕೊಟ್ಟೆ. ನಂತರ ಮಗನೊಂದಿಗೆ ಓಡಿ ಬಂದು ಮುಖ್ಯ ರಸ್ತೆ ತಲುಪಿದೆ. ಮೋಟರ್ ಸೈಕಲ್ ನಲ್ಲಿ ಬಂದ ವ್ಯಕ್ತಿ ನಮ್ಮ ಕಾರು ತಲುಪಲು ಸಹಾಯ ಮಾಡಿದ. ನಂತರ ಮನೆ ತಲುಪಿದೆವು ಎಂದು ವಿವರಿಸಿದ್ದಾರೆ.
ಪತಿಯ ಸ್ನೇಹಿತರಿಂದಲೇ ಗ್ಯಾಂಗ್ ರೇಪ್
ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಗುರುವಾರ ತಿರುವನಂತಪುರಂ ಬಳಿಯ ಪುತ್ತುಕುರಿಚಿಯ ಬೀಚ್ ಗೆ ತೆರಳಿದ್ದರು. ನಂತರ ಪತಿ ಮಹಿಳೆಯನ್ನು ತನ್ನ ಸ್ನೇಹಿತರಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ನಾಲ್ವರು ಸ್ನೇಹಿತರು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಪ್ರತಿ ದಿನ ಸಂಜೆ ಈ ಕುಟುಂಬ ಬೀಚ್ ಗೆ ತೆರಳುತ್ತಿತ್ತು. ಆದರೆ ಈ ಬಾರಿ ಮಹಿಳೆಯ ಪತಿ ಆತನ ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ಮದ್ಯದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಸಂತ್ರಸ್ತೆಯನ್ನು ತನ್ನ ಸ್ನೇಹಿತರ ಬಳಿ ಬಿಟ್ಟು ಮರಳಿದ್ದಾನೆ. ಅವರು ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.
ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ








