ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆತಂಕದಿಂದ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಲಾಕ್ ಡೌನ್ ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಗೊಳಿಸಿದೆ.
ಇಂದು ಸಿಎಂ ಬಿಎಸ್ ವೈ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ವೇಳೆ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಿಗೆ ವಿನಾಯಿತಿ ನೀಡಿದ್ದಾರೆ.
ಗ್ರೀನ್ ಝೋನ್ ನಲ್ಲಿರುವ ರಾಯಚೂರು, ಶಿವಮೊಗ್ಗ, ಯಾದಗಿರಿ, ಹಾಸನ, ಕೊಪ್ಪಳ, ಹಾವೇರಿ, ಕೋಲಾರ, ರಾಮನಗರ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಗೆ ಈ ಹೊಸ ಮಾರ್ಗಸೂಚಿ ಅನ್ವಯವಾಗಲಿವೆ, ಈ ಜಿಲ್ಲೆಗಳಲ್ಲಿರುವ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ವಿಶೇಷ ಆರ್ಥಿಕ ವಲಯ, ಕೈಗಾರಿಕಾ ವಲಯ, ಕೈಗಾರಿಕಾ ಟೌನ್ ಶಿಪ್, ರಫ್ತು ಆಧಾರಿತ ವಲಯಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಬೇಕು. ಈ ಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳದಲ್ಲೇ ತಂಗಲು ಅವಕಾಶ ಕಲ್ಪಿಸಬೇಕು. ಅಲ್ಲದೇ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿರುವ ಕಾಂಪ್ಲೆಕ್ಸ್, ವಸತಿ ಸಮುಚ್ಚಯಗಳಲ್ಲಿರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಶೇ. 50ರಷ್ಟು ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇನ್ನು ಗ್ರೀನ್ ಜೋನ್ ನಲ್ಲಿರುವ ಮಾಲ್ ಗಳನ್ನು ತೆರೆಯುವಂತಿಲ್ಲ.. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಈ ಹೊಸ ಮಾರ್ಗಸೂಚಿ ಮೇ.3ರವರೆಗೆ ಅನ್ವಯವಾಗಲಿದೆ. ಇನ್ನು ಈ ಮಾರ್ಗಸೂಚಿ ಕೇವಲ 13 ಜಿಲ್ಲೆಗಳಿಗೆ ಅನ್ವಯವಾಗಲಿದ್ದು. 8 ಜಿಲ್ಲೆಗಳಿಗೆ ಅನ್ವಯ ಆಗುವುದಿಲ್ಲ. ಇನ್ನು ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.