ಮಂಡ್ಯ: ಭತ್ತದ ನಾಟಿ ಕಾರ್ಯದಲ್ಲಿ ಮಹಿಳೆಯರು ಕೂಡ ಯಂತ್ರಗಳನ್ನು ನಿಭಾಯಿಸಬಹುದು ಮತ್ತು ಈ ಮೂಲಕ ಕೃಷಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಹುದು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ನಂದಿನಿ ಕೆ.ಆರ್. ಅವರು ತೋರಿಸಿಕೊಟ್ಟಿದ್ದಾರೆ. ಹೊಳಲು ಗ್ರಾಮದಲ್ಲಿ ನಡೆದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಅವರು ಸ್ವತಃ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಯಾಂತ್ರಿಕೃತ ನಾಟಿಯಲ್ಲಿ ಮಹಿಳಾ ಸಬಲೀಕರಣ
ಕೃಷಿ ಕೆಲಸಗಳಿಗೆ ಕೂಲಿಕಾರರ ಕೊರತೆಯಿಂದಾಗಿ ರೈತರು ಸಮಯಕ್ಕೆ ಸರಿಯಾಗಿ ನಾಟಿ ಮಾಡಲು ಸಾಧ್ಯವಾಗದೆ ಇಳುವರಿ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಯಾಂತ್ರಿಕೃತ ನಾಟಿ ಪ್ರಮುಖ ಪರಿಹಾರವಾಗಿದೆ. ಆದರೆ, ಯಂತ್ರಗಳನ್ನು ನಿರ್ವಹಿಸುವುದು ಪುರುಷರಿಗೆ ಮಾತ್ರ ಸಾಧ್ಯ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಹೋಗಲಾಡಿಸಲು ನಂದಿನಿ ಕೆ.ಆರ್. ಅವರು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಯಂತ್ರ ನಿರ್ವಹಣೆ ಬಗ್ಗೆ ತರಬೇತಿ ನೀಡಿ, ಅವರಲ್ಲಿ ಧೈರ್ಯ ತುಂಬಿದರು. ಮಹಿಳೆಯರು ಸಹ ಯಂತ್ರಗಳನ್ನು ಬಳಸಿ ಸಮಯ ಮತ್ತು ಹಣ ಉಳಿತಾಯ ಮಾಡಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಪ್ರಯೋಗ ಯಶಸ್ವಿಯಾದರೆ, ಭತ್ತದ ನಾಟಿ ಮಾಡುವ ರೈತರಿಗೆ ದೊಡ್ಡ ಅನುಕೂಲವಾಗಲಿದೆ. ಅಲ್ಲದೆ, ಮಹಿಳೆಯರು ಕೃಷಿ ಯಂತ್ರಗಳ ಬಳಕೆಗೂ ಮುಂದಾಗಿ ಆರ್ಥಿಕವಾಗಿ ಸಬಲರಾಗಲು ಇದು ನೆರವಾಗಲಿದೆ.







