ಬೆಂಗಳೂರು ನಗರದ ಹೃದಯಭಾಗದಲ್ಲಿ ಇರುವ ಪ್ರಸಿದ್ಧ ಕಬ್ಬನ್ ಪಾರ್ಕ್‌ನಲ್ಲಿ ಇದೀಗ ಹಲವು ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಬೃಹತ್ ಬದಲಾವಣೆಯನ್ನು ಮಾಡಲಾಗಿದೆ. ಪರಿಸರದ ಶಾಂತಿ, ಸಾರ್ವಜನಿಕರ ಸುರಕ್ಷತೆ ಹಾಗೂ ಪಾರ್ಕ್‌ನ ಸೌಂದರ್ಯ ಕಾಪಾಡುವ ಉದ್ದೇಶದಿಂದ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ರೀಲ್ಸ್, ಫೋಟೋಶೂಟ್, ಚಿತ್ರೀಕರಣಕ್ಕೆ ಬ್ರೇಕ್!
ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ರೀಲ್ಸ್ ಮಾಡಲು, ಪ್ರೀ ವೆಡ್ಡಿಂಗ್ ಅಥವಾ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಮದುವೆ ಶೂಟಿಂಗ್, ಕಿರುಚಿತ್ರ, ಸೀರಿಯಲ್ ಅಥವಾ ಚಲನಚಿತ್ರ ಚಿತ್ರೀಕರಣ ಸಂಪೂರ್ಣ ನಿಷೇಧಿಸಲಾಗಿದೆ. ಪಾರ್ಕ್‌ನ್ನು ವಾಣಿಜ್ಯ ಚಿತ್ರೀಕರಣದ ಸ್ಥಳವಾಗಿ ಬಳಸಲು ಅವಕಾಶವಿಲ್ಲ.
ಸಾಮಾನ್ಯ ಪ್ರವಾಸಿಗರಿಗೆ ಛಾಯಾಗ್ರಹಣಕ್ಕೆ ಮಾತ್ರ ಪರವಾನಗಿ
ಸಾಮಾನ್ಯ ಸಾರ್ವಜನಿಕರು ಮತ್ತು ಪ್ರವಾಸಿಗರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಕ್ಯಾಮೆರಾ ಬಳಸಿ ವೈಯಕ್ತಿಕ ನೆನಪಿಗಾಗಿ ಫೋಟೋ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಇದರ ಹೆಸರಿನಲ್ಲಿ ಶೂಟಿಂಗ್ ನಡೆಸುವುದು ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ.
ಪಾರ್ಕ್ ಸಮಯ ನಿಗದಿ: ವಾಯು ವಿಹಾರದ ನಿರ್ಧಿಷ್ಟ ಅವಧಿ
ಪಾರ್ಕ್‌ನಲ್ಲಿ ವಿಹಾರಕ್ಕೆ ನಿಗದಿತ ಸಮಯವನ್ನು ಅಧಿಕಾರಿಗಳು ಪ್ರಕಟಿಸಿದ್ದು:
ಬೆಳಿಗ್ಗೆ 5:30 ರಿಂದ 9:00 ಗಂಟೆವರೆಗೆ
ಸಂಜೆ 4:30 ರಿಂದ 6:30 ಗಂಟೆವರೆಗೆ
ಈ ಸಮಯದ ಹೊರತು ಪಾರ್ಕ್ ಪ್ರವೇಶ ಅಥವಾ ವಿಹಾರ ನಿಷಿದ್ಧವಾಗಿದೆ. ಈ ನಿಯಮಗಳ ಉಲ್ಲಂಘನೆ ಮಾಡಿದರೆ ದಂಡ ಅಥವಾ ಕಾನೂನು ಕ್ರಮ ಎದುರಾಗಬಹುದು.
ಊಟ-ತಿಂಡಿ ಸೇವನೆಗೂ ನಿಷೇಧ
ಪಾರ್ಕ್‌ನಲ್ಲಿ ಊಟ ಮಾಡುವುದು, ಪಿಕ್ನಿಕ್ ಆಯೋಜಿಸುವುದು, ತಿಂಡಿತಿನಿಸು ತರುವುದನ್ನು ಕೂಡಾ ನಿಷೇಧಿಸಲಾಗಿದೆ. ಪಾರ್ಕ್ ಶುದ್ಧತೆ ಮತ್ತು ಪರಿಸರದ ಶಿಸ್ತು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಧಿಕಾರಿಗಳ ಸ್ಪಷ್ಟನೆ
ಪಾರ್ಕ್ ಆಡಳಿತ ಮಂಡಳಿಯ ಪ್ರಕಾರ, ಇತ್ತೀಚೆಗೆ ಹೆಚ್ಚು ಜನ ವಾಣಿಜ್ಯ ಶೂಟಿಂಗ್, ಯೂಟ್ಯೂಬ್ ವೀಡಿಯೋ ಮತ್ತು ರೀಲ್ಸ್ ಶೂಟ್ ಮಾಡುತ್ತಿದ್ದ ಕಾರಣ ಪಾರ್ಕ್ ನೈಜ ಉದ್ದೇಶ ಹಾಳಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.








