ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾದ ಘರ್ಜನೆ ಸ್ತಬ್ದಗೊಂಡಿದೆ. ಕೊಹ್ಲಿ ಪಡೆಯ ಗೆಲುವಿನ ಅಭಿಯಾನಕ್ಕೆ ವಿಲಿಯಮ್ಸನ್ ಪಡೆ ಬ್ರೇಕ್ ಹಾಕಿದೆ. ಆಕ್ರಮಣಕಾರಿ ಪ್ರವೃತ್ತಿಯ ನಾಯಕ ಕೊಹ್ಲಿಗೆ ಜೂನಿಯರ್ ಕೂಲ್ ಕ್ಯಾಪ್ಟನ್ ವಿಲಿಯಮ್ಸನ್ ಕೂಲ್ ಆಗಿಯೇ ಶಾಕ್ ನೀಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ತಂಡ ತನ್ನ ನೆಲದಲ್ಲಿ ಸೋಲಿಸುವುದು ಅಷ್ಟೊಂದು ಸುಲಭವಿಲ್ಲ ಎಂಬುದನ್ನು ಬಲಿಷ್ಠ ಟೀಮ್ ಇಂಡಿಯಾಗೆ ಮನವರಿಕೆ ಮಾಡಿಕೊಟ್ಟಿದೆ.
ಹೌದು, ನ್ಯೂಜಿಲೆಂಡ್ ತವರಿನಲ್ಲಿ ಸತತ ಆರು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಪ್ರಬಲ ಇಂಗ್ಲೆಂಡ್ ತಂಡವನ್ನೇ ಮಣ್ಣು ಮುಕ್ಕಿಸಿರುವ ನ್ಯೂಜಿಲೆಂಡ್ ಈಗ ಟೀಮ್ ಇಂಡಿಯಾಗೂ ಸೋಲಿನ ಪಾಠ ಕಲಿಸಿದೆ. ಟಿ-ಟ್ವೆಂಟಿಯಲ್ಲಿ ಅಬ್ಬರಿಸಿದ್ದ ಟೀಮ್ ಇಂಡಿಯಾ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾದಿಂದ ಸಾಂಘಿಕ ಆಟ ಹೊರಬಂದಿಲ್ಲ. ಬ್ಯಾಟಿಂಗ್, ಬೌಲಿಂಗ್ ವಿಭಾಗಗಳಲ್ಲಿ ಯಾರು ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಹೀಗಾಗಿ ನಾಯಕ ಕೊಹ್ಲಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಅಲ್ಲದೆ ಎಡವಿದ್ದು ಎಲ್ಲಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಅಂದ ಹಾಗೇ, ಪಂದ್ಯದಲ್ಲಿ ಸೋಲು ಗೆಲುವು ಇದ್ದದ್ದೇ. ಆದ್ರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸದಾ ಗೆಲುವಿನ ಹಸಿವಿನಲ್ಲೇ ಇರುವ ಕೊಹ್ಲಿ ಕೂಡ ನ್ಯೂಜಿಲೆಂಡ್ ನೆಲದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಸುನಾಮಿಯಂತೆ ರನ್ ಗಳಿಸುತ್ತ ಶತಕದ ಮೇಲೆ ಶತಕ ದಾಖಲಿಸುತ್ತಿದ್ದ ಕೊಹ್ಲಿ ಸರಿ ಸುಮಾರು ಆರು ವರ್ಷಗಳ ಬಳಿಕ ಈ ರೀತಿಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. 2014ರ ಇಂಗ್ಲೆಂಡ್ ಸರಣಿಯಲ್ಲೂ ಕೊಹ್ಲಿ ಹೀನಾಯ ಪ್ರದರ್ಶನ ನೀಡಿದ್ದರು.
ಆದ್ರೆ ನ್ಯೂಜಿಲೆಂಡ್ ನೆಲದಲ್ಲಿ ಯಾವುದೇ ತಂಡವಾಗಿರಲಿ. ಅಲ್ಲಿ ಗೆಲುವು ಸಾಧಿಸುವುದು ಅಷ್ಟೊಂದು ಸುಲಭವಿಲ್ಲ. ಮುಖ್ಯವಾಗಿ ನ್ಯೂಜಿಲೆಂಡ್ ನೆಲದಲ್ಲಿ ಸಾಂಘಿಕ ಆಟವನ್ನು ಆಡಲೇಬೇಕು. ಅಲ್ಲಿನ ಪಿಚ್ ಅನ್ನು ಅರಿತುಕೊಂಡು ಬ್ಯಾಟಿಂಗ್ ಮಾಡಿದ್ರೆ ಮಾತ್ರ ಯಶ ಸಾಧಿಸಲು ಸಾಧ್ಯ. ಹಾಗೇ ತಂಡದ ಪ್ರಮುಖ ಆಟಗಾರರ ಜೊತೆ ಕೆಳ ಕ್ರಮಾಂಕದ ಆಟಗಾರರ ಬ್ಯಾಟ್ ನಲ್ಲಿ ರನ್ ಹರಿದುಬರಬೇಕು. ಅಲ್ಲದೆ 300ಕ್ಕೂ ಅಧಿಕ ರನ್ ಪೇರಿಸಿದ್ರೆ ಮಾತ್ರ ಪ್ರಬಲ ಪ್ರತಿಸ್ಪರ್ಧೆ ಒಡ್ಡಬಹುದು. ಗೆಲುವಿನ ಲೆಕ್ಕಚಾರವನ್ನು ಹಾಕಿಕೊಳ್ಳಬಹುದು.
ಇನ್ನು ಕಳೆದ ಹತ್ತು ವರ್ಷಗಳಲ್ಲಿ ನ್ಯೂಜಿಲೆಂಡ್ ತವರಿನಲ್ಲಿ ಬಲಿಷ್ಠ ತಂಡ ಎಂಬುದನ್ನು ಸಾಬಿತುಪಡಿಸಿದೆ. ಅದಕ್ಕೆ ಪೂರಕವಾದ ಅಂಕಿ ಅಂಶಗಳು ಇವೆ. ಹತ್ತು ವರ್ಷಗಳಲ್ಲಿ ನ್ಯೂಜಿಲೆಂಡ್ ತವರಿನಲ್ಲಿ 41 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 21 ಪಂದ್ಯಗಳನ್ನು ಗೆದ್ದುಕೊಂಡ್ರೆ, ಸೋತಿರುವುದು ಕೇವಲ 7 ಪಂದ್ಯಗಳನ್ನು ಮಾತ್ರ. ಇನ್ನುಳಿದ 13 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಆದ್ರೆ ಕಳೆದ ಹತ್ತು ವರ್ಷಗಳಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ನ್ಯೂಜಿಲೆಂಡ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ.. ಆಡಿರುವ 25 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಹತ್ತು ಪಂದ್ಯಗಳನ್ನು ಗೆದ್ದುಕೊಂಡ್ರೆ, ಐದು ಪಂದ್ಯಗಳಲ್ಲಿ ಸೋತಿದೆ. ಇನ್ನುಳಿದ 10 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಹಾಗೇ ಕಳೆದ ಐದು ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿರುವುದು ಒಂದು ಬಾರಿ ಮಾತ್ರ. 1998-99ರಲ್ಲಿ ಭಾರತ 3 ಪಂದ್ಯಗಳ ಸರಣಿಯಲ್ಲಿ 0-1ರಿಂದ ಸೋತ್ರೆ, 2002-03ರಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ 0-2ರಿಂದ ಮುಖಭಂಗ ಅನುಭವಿಸಿದೆ. ಆದ್ರೆ 2008-09ರ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0ಯಿಂದ ಗೆದ್ದುಕೊಂಡಿತ್ತು. ಇನ್ನು 2013-14ರ ಎರಡು ಪಂದ್ಯಗಳ ಸರಣಿಯನ್ನು 0-1ರಿಂದ ಸೋಲು ಅನುಭವಿಸಿತ್ತು. ಇದೀಗ 2020ರ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಪರಾಭವಗೊಂಡಿದೆ.