ಬೆಂಗಳೂರು: ತಂತ್ರಜ್ಞಾನ ಜನರ ಬದುಕನ್ನು ಆವರಿಸಿದೆ. ಇದು ನಮ್ಮ ಭಾಷೆ ಮತ್ತು ಬದುಕಿನ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ತಂತ್ರಜ್ಞಾನದ ಬಳಕೆ ಮೂಲಕ ಕನ್ನಡವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಇಂದಿನಿಂದ ಮುಂದಿನ ವರ್ಷದ ನವೆಂಬರ್‍ವರೆಗೆ `ಕನ್ನಡ ಕಾಯಕ ವರ್ಷ’ವಾಗಿ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸರಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮೂಲಕ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಈ ವರ್ಷವನ್ನು ಕನ್ನಡ ಕಾಯಕ ವರ್ಷವನ್ನಾಗಿ ಮಾಡಲು ರೂಪುರೇಷೆ ಸಿದ್ಧಪಡಿಸಲಾಗುವುದು. ಶೀಘ್ರದಲ್ಲೇ ಯೋಜನೆಯ ರೂಪುರೇಷೆಗಳನ್ನು ಸಿದ್ದಪಡಿಸಿ ಅನುಷ್ಠಾನಕ್ಕೆ ತರಲಾಗುವುದು. ಕೇವಲ ನವೆಂಬರ್ 1ರಂದು ಮಾತ್ರ ಕನ್ನಡಿಗರಾಗದೇ ವರ್ಷಪೂರ್ತಿ ಕನ್ನಡತನ ಹೊಂದಿರಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಕನ್ನಡದಲ್ಲಿ ಇಂದು ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. ಹೀಗಾಗಿ ಕನ್ನಡಿಗರ ಪರವಾಗಿ ಪ್ರಧಾನಿಗೆ ಧನ್ಯವಾದ ತಿಳಿಸುತ್ತೇನೆ ಎಂದ ಅವರು, ಕೋವಿಡ್ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಿದೆ. ಆದರೆ, ನಮ್ಮ ಸರ್ಕಾರ ಅದನ್ನು ದಿಟ್ಟವಾಗಿ ಎದುರಿಸಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಕೊರೊನಾ ಮಹಾಮಾರಿಯನ್ನು ಓಡಿಸಬೇಕು. ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ರೈತಾಪಿ ವರ್ಗ, ಕೃಷಿ ವಲಯ ಹಾಗೂ ಆರ್ಥಿಕ ವಲಯಕ್ಕೆ ತೊಂದರೆಯಾಗಿದ್ದರೂ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ ಎಂದರು.
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು, ಅದೇ ಗೋವರ್ಧನಗಿರಿಯಾಗುತ್ತದೆ ಎಂದು ರಾಷ್ಟ್ರಕವಿ ಹೇಳಿದ ಮಾತುಗಳು ನನಗೆ ನೆನಪಿಗೆ ಬರುತ್ತದೆ. ಕನ್ನಡದ ಉಳಿವಿಗಾಗಿ ಹೆಚ್ಚೆಚ್ಚು ಕನ್ನಡ ಬಳಸಬೇಕು. ದೈನಂದಿನ ಚಟುವಟಿಕೆಗಳಲ್ಲಿ ಕನ್ನಡದಲ್ಲೇ ಮಾತನಾಡಿ, ಬರೆಯಬೇಕು. ಮನೆಯಲ್ಲಿ ಮಕ್ಕಳ ಜತೆ ಮಾತೃಭಾಷೆ ಕನ್ನಡದಲ್ಲೇ ಮಾತನಾಡಬೇಕು. ಮಕ್ಕಳು ಕನ್ನಡ ಭಾಷೆ ಕಲಿಯುವುದರಿಂದ ಹಾಗೂ ಹೆಚ್ಚೆಚ್ಚು ಬಳಸುವುದರಿಂದ ನಮ್ಮ ಭಾಷೆ ಜೀವಂತವಾಗಿರುತ್ತದೆ. ಬಳಕೆ ಮಾಡಿದಷ್ಟು ಕನ್ನಡ ಭಾಷೆ ಬೆಳೆಯುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಕ ಶಿಕ್ಷಣ ನೀಡುವುದಕ್ಕೆ ಕೇಂದ್ರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಮತ್ತಷ್ಟು ಬಲ ಸಿಗಲಿದೆ. ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಭಾವೋದ್ವೇಗ, ಭಾವನಾತ್ಮಕ ಪ್ರೀತಿ ಮುಖ್ಯ. ಆದರೆ, ಅವೆಲ್ಲವೂ ಕೇವಲ ಆಚರಣೆ ಮೂಲಕ ನೀರಿನಂತೆ ವ್ಯರ್ಥವಾಗಿ ಹರಿದು ಹೋಗಬಾರದು ಎಂದು ಸಿಎಂ ಬಿಎಸ್‍ವೈ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಾಡ ಧ್ವಜಾರೋಹಣ ಮಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊರೊನಾ ಅವಧಿಯಲ್ಲಿ ಬಡಕುಟುಂಬದ ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖಮಾಡಿದ್ದಾರೆ. ಈವರಗೆ ಸುಮಾರು 90 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಇದು ಕಳೆದ 14 ವರ್ಷಗಳ ದಾಖಲೆಯಾಗಿದೆ ಎಂದರು.
ಶಿಕ್ಷಣ ಇಲಾಖೆ ಹಾಗೂ ಅದರ ಕಾರ್ಯಕ್ರಮಗಳ ಮೇಲೆ ಕೊರೊನಾ ಪರಿಣಾಮ ಬೀರಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನೂ ಕೊರೊನಾ ಕಸಿದುಕೊಂಡಿದೆ. ಆದರೆ, ನಮ್ಮ ಕನ್ನಡನಾಡಿನ ಸಂಕಲ್ಪವನ್ನು ಕಸಿಯಲು ಸಾಧ್ಯವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel