ಜನರನ್ನು ದಾರಿತಪ್ಪಿಸಲು ನಾಚಿಕೆಗೆಟ್ಟ ರೀತಿ ವರ್ತಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮನಮೋಹನ್ ಸಿಂಗ್ ಬಳಿ ರಾಹುಲ್ ರೈಟಾಫ್ ಬಗ್ಗೆ ತಿಳಿದುಕೊಳ್ಳಲಿ ಎಂದು ಸರಣಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಆರ್.ಬಿ.ಐ 50 ಮಂದಿ ಉದ್ಯಮಿಗಳ ಸಾಲವನ್ನು ರೈಟಾಫ್ ಮಾಡಿದ ವಿವರವನ್ನು ಬಹಿರಂಗ ಪಡಿಸಿದ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಅವರೆಲ್ಲಾ ಬಿಜೆಪಿಯ ಸ್ನೇಹಿತರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಮಾಹಿತಿಯನ್ನು ಸಂಸತ್ತಿನಲ್ಲಿ ಬಹಿರಂಗ ಪಡಿಸಲಿಲ್ಲ ಎಂದು ಆರೋಪಿಸಿದ್ದರು.
ಆರ್.ಬಿ.ಐ ರೈಟಾಫ್ ಮಾಡಿದವರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್ ಮಾಡಿ ನಾನು ಸಂಸತ್ತಿನಲ್ಲಿ ಬ್ಯಾಂಕು ಹಗರಣ ಮಾಡಿದವರ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೆ. ಆದರೆ ಹಣಕಾಸು ಸಚಿವರು ಈ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಈಗ ಆರ್.ಬಿ.ಐ ಬಹಿರಂಗ ಮಾಡಿರುವ ಪಟ್ಟಿಯಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ, ಮತ್ತು ಬಿಜೆಪಿ ಸ್ನೇಹಿತರ ಹೆಸರುಗಳು ಇವೆ. ಈ ಕಾರಣಕ್ಕೆ ಅವರು ಸಂಸತ್ತಿನಲ್ಲಿ ಸತ್ಯವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.
50 ಮಂದಿ ಉದ್ಯಮಿಗಳ ಸಾಲವನ್ನು ರೈಟಾಫ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸರಣಿ ಟ್ವೀಟ್ ಗಳ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಜನರನ್ನು ದಾರಿತಪ್ಪಿಸಲು ನಾಚಿಕೆಗೆಟ್ಟ ರೀತಿ ವರ್ತಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ. ತಮಗೆ ತೋಚಿದ ವಿಚಾರವನ್ನು ತಮಗೆ ಬೇಕಾದಂತೆ ಹೇಳುತ್ತಾರೆ. ಮೊದಲು ರಾಹುಲ್ ಗಾಂಧಿ ಆರ್ಥಿಕ ವ್ಯವಸ್ಥೆಯನ್ನು ಸರಿ ಮಾಡಲು ಕಾಂಗ್ರೆಸ್ ವಿಫಲವಾಗಿದ್ದು ಯಾಕೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತದಲ್ಲಿ ಇದ್ದಾಗಲೂ ಅಥವಾ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರ ನಿಲ್ಲಿಸಲು ಯಾವುದೇ ಬದ್ಧತೆ ತೋರಿಸಲಿಲ್ಲ ಎಂದು ಹಣಕಾಸು ಸಚಿವೆ ಟ್ವೀಟ್ ಮಾಡಿದ್ದಾರೆ.
ನಂತರ ಮುಂದುವರಿಸಿದ ತಮ್ಮ ಸರಣಿ ಟ್ವೀಟ್ ನಲ್ಲಿ ಸುಸ್ತಿದಾರರ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ 3,515 ಎಫ್.ಐ.ಆರ್ ದಾಖಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಪ್ರಕರಣಗಳ ಪೈಕಿ ಒಟ್ಟು 18,332 ಕೋಟಿ ಮೌಲ್ಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವಾಣಿಜ್ಯ ಬ್ಯಾಂಕುಗಳು 2009-2010 ಮತ್ತು 2013-2014ರ ನಡುವೆ 1,45,226 ಕೋಟಿ ರೂ. ರೈಟಾಫ್ ಮಾಡಿವೆ. ರಾಹುಲ್ ಗಾಂಧಿ ಎನ್.ಡಿ.ಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಳಿ ರೈಟಾಫ್ ಎಂದರೇನು ಎಂದು ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
2006ರಿಂದ 2008ರ ನಡುವೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಸೃಷ್ಟಿಯಾಗಿತ್ತು ಎಂದು ತಮ್ಮ ವಾದಕ್ಕೆ ಸಾಲ ಹಿಂತಿರುಗಿಸದೆ ವಂಚಿಸಿದ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ವಿಜಯ್ ಮಲ್ಯ ಪ್ರಕರಣದಲ್ಲಿ 1,693 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ವಿಜಯ್ ಮಲ್ಯ ಅವರನ್ನು ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದ್ದು ಭಾರತ ಸರ್ಕಾರ, ಇಂಗ್ಲೆಂಡ್ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ. ಹೈಕೋರ್ಟ್ ಸಹ ಹಸ್ತಾಂತರ ಪರವಾಗಿಯೇ ತೀರ್ಪು ನೀಡಿದೆ ಎಂದು ಹೇಳಿದರು.
ನೀರವ್ ಮೋದಿ ಪ್ರಕರಣದಲ್ಲಿ 2,387 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, 53.45 ಕೋಟಿ ರೂ. ಮೌಲ್ಯದ ಲಕ್ಷುರಿ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈಗಾಗಲೇ ನೀರವ್ ಮೋದಿ ಇಂಗ್ಲೆಂಡ್ ಜೈಲಿನಲ್ಲಿದ್ದಾರೆ. ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 1,936.95 ಕೋಟಿ ರೂ. ಮೌಲ್ಯ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಈಗಾಗಲೇ ರೆಡ್ ನೋಟಿಸ್ ಹೊರಡಿಸಲಾಗಿದೆ. ಆಂಟಿಗುವಾ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೂಡ ಕೇಳಲಾಗಿದೆ ಎಂದು ಮಾಹಿತಿ ನೀಡಿದರು.
ಸಾಲ ಮರಳಿಸುವ ಶಕ್ತಿ ಇದ್ದರೂ ಹಿಂತಿರುಗಿಸದೆ ಇದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಗಿದ್ದು, ಇಂತವರು ಹಿಂದಿನ ಯುಪಿಎ ಸರ್ಕಾರದ ‘ಫೋನ್ ಬ್ಯಾಂಕಿಂಗ್’ ಸೌಲಭ್ಯವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.