ತೆರಿಗೆ ಬಾಕಿ ಉಳಿಸಿಕೊಳ್ಳದವರಿಗೆ ವಿಳಂಬ ಶುಲ್ಕ ರದ್ದು – ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಜೂನ್ 13: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 2017 ಮತ್ತು ಜನವರಿ 2020 ರ ನಡುವೆ ತೆರಿಗೆ ಬಾಕಿ ಉಳಿಸಿಕೊಂಡಿರದ ನೋಂದಾಯಿತ ಸಂಸ್ಥೆಗಳಿಗೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 40 ನೇ ಜಿಎಸ್‌ಟಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 2020 ರಲ್ಲಿ ಜಾರಿಗೆ ಬರುವಂತೆ 5 ಕೋಟಿ ರೂ. ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರಿಗೆ ಸರಬರಾಜುಗಳಿಗಾಗಿ ರಿಟರ್ನ್ಸ್ ವಿಳಂಬ ಪಾವತಿಗೆ ಬಡ್ಡಿದರವನ್ನು ವಾರ್ಷಿಕ ಶೇ 18ರಿಂದ ಶೇ. 9 ಕ್ಕೆ ಇಳಿಸಲಾಗಿದೆ.
ಸಣ್ಣ ತೆರಿಗೆದಾರರಿಗೆ ಪರಿಹಾರಕ್ಕಾಗಿ ಅಧಿಸೂಚಿತ ದಿನಾಂಕಗಳವರೆಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ ಮತ್ತು ಇದು ಸೆಪ್ಟಂಬರ್ ತಿಂಗಳವರೆಗೂ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಪ್ರತಿ ತಿಂಗಳ ಮಾರಾಟ ರಿಟರ್ನ್ ಸಲ್ಲಿಕೆ ಮಾಡದವರಿಗೆ ವಿಳಂಬ ಶುಲ್ಕವನ್ನು ಗರಿಷ್ಠ 500 ರೂಪಾಯಿವರೆಗೆ ನಿಗದಿಗೊಳಿಸಲಾಗಿದ್ದು, ತೆರಿಗೆ ಬಾಕಿ ಇಲ್ಲದ ನೊಂದಾಯಿತ ಸಂಸ್ಥೆಗಳು ಜಿಎಸ್ಟಿ ರಿಟರ್ನ್ ಸಲ್ಲಿಕೆ ಮಾಡದಿದ್ದರೆ ವಿಳಂಬ ಶುಲ್ಕ ವಿಧಿಸುವುದಿಲ್ಲ ಎಂದು ಸಚಿವೆ ಹೇಳಿದರು.

ರಾಜ್ಯಗಳಿಗೆ ನೀಡಬೇಕಾದ ಪರಿಹಾರ ಸೆಸ್ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲು ಜುಲೈನಲ್ಲಿ ಸಭೆ ನಡೆಯಲಿದ್ದು ದಿನಾಂಕ ಇನ್ನೂ ನಿಗದಿ ಪಡಿಸಿಲ್ಲ ಎಂದು ವಿತ್ತ ಸಚಿವೆ ಹೇಳಿದರು.
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು.








