ಹಾಸನ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಅದು ಕೇವಲ ಊಹಾಪೋಹ ಮಾತ್ರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಹೇಳಿದೆ. ಸಿದ್ದರಾಮಯ್ಯ (CM Siddaramaiah) ಅವರ ಬದಲಾವಣೆ ಯಾವುದೇ ಕಾರಣಕ್ಕೂ ಆಗಲ್ಲ. ಅದು ಕೇವಲ ಊಹಾಪೋಹ ಎಂದಿದ್ದಾರೆ.
ಏನೇ ಹೇಳಿದರೂ ಸಿಎಂ ಬದಲಾವಣೆ ಚರ್ಚೆ ಪಕ್ಷದೊಳಗೆ ನಡೆದಿಲ್ಲ. ಹಾಗಾಗಿ ಆ ಪ್ರಶ್ನೆ ಉದ್ಭವಿಸದು. ಸಿಎಂ ಹಾಲಿ ಇದ್ದಾರೆ. ನಾನು 2028ಕ್ಕೆ ಸಿಎಂ ಆಗಬೇಕೆಂಬ ಬಯಕೆ ಹೊಂದಿದ್ದೇನೆ. ಅದೇ ಕಾರಣಕ್ಕೆ ನನ್ನ ಮಗಳೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿರಬಹುದು ಎಂದಿದ್ದಾರೆ.
ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ. ನಾನು ಮುಂದೆ ಸಿಎಂ ಆದರೆ ಅದು ಸಿದ್ದರಾಮಯ್ಯ ಅವರ ಸಹಕಾರದಿಂದಲೇ ಆಗುತ್ತೇನೆ ಎಂದಿದ್ದಾರೆ.
ಮೈಸೂರು ಲೋಕಾಯುಕ್ತದಲ್ಲಿ ನಡೆಯುತ್ತಿರುವ ತನಿಖೆಗೆ ಸಿಎಂ ಅವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ. ಅದರಲ್ಲಿ ಯಾವುದೇ ಮುಜುಗರದ ಪ್ರಶ್ನೆ ಇಲ್ಲ. ಸಿಎಂ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿಯ ಹಲವು ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ.








