ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ತುದಿಗಾಲ ಮೇಲೆ ನಿಂತಿದೆ ಎಂಬ ಊಹಾಪೋಹಗಳನ್ನು ಅಲ್ಲಗಳೆದಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳನ್ನು ಆರಂಭಿಸುವ ಬಗ್ಗೆ ಈ ಕ್ಷಣದವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್, ಇನ್ನೂ ಎರಡು ದಿನ ಸಭೆ ನಡೆಸುತ್ತೇವೆ. ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿನ ಸ್ಥಿತಿಗತಿಯ ಬಗ್ಗೆಯೂ ಅಧ್ಯಯನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿರುವ ವಸತಿ ಶಾಲೆಗಳ ಮುಖ್ಯಸ್ಥರ ಜೊತೆ ಇಲಾಖೆಯ ಆಯುಕ್ತರು ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗೆ ವರದಿ ಸಲ್ಲಿಸುತ್ತೇವೆ. ಆ ಬಳಿಕ ಅಂತಿಮ ಹಂತಕ್ಕೆ ಬರುತ್ತೇವೆ ಎಂದು ತಿಳಿಸಿದರು.

ಶಾಲೆಗಳ ಆರಂಭದ ಕುರಿತು ಶಿಕ್ಷಕರ ಸಂಘಗಳ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿದ್ದೇವೆ. ಮೈಸೂರು ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರಿನ ಖಾಸಗಿ ಶಾಲೆಗಳ ಪ್ರತಿನಿಧಿಗಳು ಕೂಡಾ ಶಾಲೆಗಳನ್ನು ಆರಂಭಿಸುವ ಕುರಿತುಗ ಸಭೆ ನಡೆಸುತ್ತಿದ್ದಾರೆ. ಅವರ ಅಭಿಪ್ರಾಯವನ್ನೂ ಸ್ವೀಕರಿಸುತ್ತೇವೆ. ಎಲ್ಲ ಬೆಳವಣಿಗೆಗಳನ್ನು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತೇವೆ. ಈಗಾಗಾಲೇ ಶಾಲಾ ಅಭಿವೃದ್ಧಿ ಸಮಿತಿಗಳ (ಎಸ್‍ಡಿಎಂಸಿ) ರಾಜ್ಯ ಮಟ್ಟದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಗಳ ಜೊತೆಗೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರತಿ ತಾಲ್ಲೂಕುಗಳಿಂದ ಎರಡು ಎಸ್‍ಡಿಎಂಸಿಗಳ ಪ್ರತಿನಿಧಿಗಳ ಜೊತೆ ಆಯುಕ್ತರು ಮಾತುಕತೆ ನಡೆಸಲಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.
ಶಾಲೆಗಳ ಆರಂಭಕ್ಕೆ ಅಧಿಕಾರಿಗಳ ಸಲಹೆ..?
ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಮೊದಲ ಹಂತದಲ್ಲಿ 8ರಿಂದ 12ರವರೆಗಿನ ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿದ್ದಾರೆ ಎಂದೂ ಹೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








