ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್..!
ಹೊಸದಿಲ್ಲಿ, ಮೇ 29: ದೇಶದಲ್ಲಿ ಕೊರೊನಾ ಸೋಂಕು ವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪದವಿ ತರಗತಿಗಳಿಗೆ ಪರೀಕ್ಷೆ ನಡೆಸದಿರಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಈ ಕುರಿತು ಮಾಹಿತಿ ನೀಡಿದ್ದು, ದೇಶದ 45 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದು ಮಾಡಲು ತೀರ್ಮಾನಿಸಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ವರ್ಷದ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಸಾಧನೆ ಮತ್ತು ಹಿಂದಿನ ಶೈಕ್ಷಣಿಕ ದಾಖಲೆಗಳನ್ನು ಆಧರಿಸಿ 2 ನೇ ವರ್ಷಕ್ಕೆ ತೇರ್ಗಡೆ ಮಾಡಲಾಗುವುದು.
ಕಳೆದ ಸೆಮಿಸ್ಟರ್ ನಲ್ಲಿ ಅಥವಾ ವರ್ಷ ಮತ್ತು ಇಂಟರ್ನಲ್ ಪರೀಕ್ಷೆಯಲ್ಲಿ ಶೇ. 50 ರಷ್ಟು ಅಂಕ ಗಳಿಸಿರುವ ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳನ್ನು ಅಂತಿಮ ವರ್ಷಕ್ಕೆ ತೇರ್ಗಡೆ ಮಾಡಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.








