ಎಗ್‌ರೈಸ್ ಹಾಗೂ ಚಿಕನ್ ಕಬಾಬ್ ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ನಡೆದಿದೆ.
ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಈ ಘಟನೆ ನಡೆದಿದ್ದು, ಗೈಬುಸಾಬ್ ಮುಲ್ಲಾ (34) ಹತ್ಯೆಯಾದ ದುರ್ದೈವಿಯಾಗಿದ್ದಾನೆ. ಮುಸ್ತಾಕ್ ಜಂಗಿ (20) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಸ್ ನಿಲ್ದಾಣದ ಬಳಿ ಎಗ್‌ರೈಸ್ ಅಂಗಡಿ ಇಟ್ಟುಕೊಂಡಿದ್ದ ಗೈಬುಸಾಬ್ ಹತ್ತಿರ ಮುಸ್ತಾಕ್ ಬಂದು, ಎಗ್‌ರೈಸ್ ಹಾಗೂ ಕಬಾಬ್ ಕೇಳಿದ್ದಾನೆ. ಆದರೆ, ಸಮಯವಾಗಿದ್ದರಿಂದ ಎಲ್ಲವೂ ಖಾಲಿ ಎಂದು ಹೇಳಿದ್ದಾನೆ. ಮೊದಲು ಹೋಗಿದ್ದ ಮುಸ್ತಾಕ್ ಮತ್ತೆ ಮರಳಿ ಬಂದು, ಚಾಕುವಿನಿಂದ ಕುತ್ತಿಗೆಗೆ ತಿವಿದು ಕೊಲೆಗೈದಿದ್ದಾನೆ.
ಆರೋಪಿ ಮುಸ್ತಾಕ್ ಈ ಹಿಂದೆಯೂ ಹಲವರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ. ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ತೆರಳಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.