ಬೆಂಗಳೂರು : ಕೊರೊನಾ ನಿಯಂತ್ರಣ ಮಾಡುವುದರಲ್ಲಿ ಬೆಂಗಳೂರು ಇಡಿ ದೇಶಕ್ಕೆ ಮಾದರಿಯಾಗಿದೆ. ಹಾಗಾಗಿ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಅಗತ್ಯವಿಲ್ಲ. ಹಾಗಾಗಿ ಬೆಂಗಳೂರಿನ ಜನತೆ ಆತಂಕಕ್ಕೆ ಒಳಗಾಗಬೇಡಿ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೆಚ್ಚು ಕಾಳಜಿ ವಹಿಸಿ ನಿರ್ವಹಿಸುತ್ತಿದೆ. ಅದರಂತೆ ಬಿಬಿಎಂಪಿ ವತಿಯಿಂದ ಸುರಕ್ಷತಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದು, ಸೋಂಕಿನ ಲಕ್ಷಣಗಳಿಗೆ ಅನುಗುಣವಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ಕೋವಿಡ್ ಆಸ್ಪತ್ರೆಗಳಿಗೆ ರವಾನಿಸಲು ಸೂಕ್ತ ಕ್ರಮವಹಿಸಲಾಗುತ್ತಿದೆ. ಅಲ್ಲದೆ ಸದ್ಯ ಕೋವಿಡ್ ಸೋಂಕಿತರನ್ನು ಕರೆದೊಯ್ಯಲು 50 ಆಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಿದ್ದು, ಅದನ್ನು ನಾಳೆಯಿಂದ 100ಕ್ಕೆ ಹೆಚ್ಚಳ ಮಾಡಲು ಕ್ರಮವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದನ್ನು ಅಗತ್ಯಕ್ಕನುಗುಣವಾಗಿ ಹೆಚ್ಚಳ ಮಾಡಲಾಗುತ್ತದೆ .
ಅಲ್ಲದೆ ಈಗಾಗಲೇ ಅಗತ್ಯ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇರುವ ಬಗ್ಗೆ ಪಾಲಿಕೆ ಕೇಂದ್ರ ಕಛೇರಿ ವಾರ್ ರೂಂ ನಲ್ಲಿ ಆನ್ ಲೈನ್ ರಿಯಲ್ ಟೈಮ್ ಟ್ರೇಸಿಂಗ್ ವ್ಯವಸ್ಥೆ ಮಾಡಲು ಸಾಪ್ಟ್ ವೇರ್ ಸಿದ್ಧಪಡಿಸಲಾಗುತ್ತಿದೆ. ಯಾವ ಆಸ್ಪತ್ರೆ/ಬೆಡ್ ವ್ಯವಸ್ಥೆ ಇರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಆಯುಕ್ತರು ತಿಳಿಸಿದರು.








