ಕಲಬುರಗಿ: ಡ್ಯಾಂ ವಿಚಾರದಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಹೇಳಿದ್ದಾರೆ.
ಬಿಜೆಪಿ ನಾಯಕರು (BJP) ಡ್ಯಾಂ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು. ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ ಎಂಬುವುದನ್ನು ಮೊದಲು ಹೇಳಿ, ಆನಂತರ ಈ ವಿಷಯವಾಗಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಅಣೆಕಟ್ಟು ಬಹಳ ಹಳೆಯದಾಗಿದ್ದರಿಂದಾಗಿ ಕ್ರಸ್ಟ್ ಗೇಟ್ ಕಳಚಿರಬಹುದು. ಬಿಜೆಪಿಯವರು ತಮ್ಮ ಆಡಳಿತ ಅವಧಿಯಲ್ಲಿ ಎಷ್ಟು ಡ್ಯಾಂಗಳ ಸ್ಟ್ರೆಂತ್ ಪರಿಶೀಲನೆ ಮಾಡಿದ್ದಾರೆ? ಅದರ ವರದಿಯ ದಾಖಲೆ ಕೊಡಲಿ. ಅವರ ವರದಿಯನ್ನು ನಾವು ನಿರ್ಲಕ್ಷ್ಯ ಮಾಡಿದ್ದರೆ ಆರೋಪ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ರಾಜ್ಯದ ಎಲ್ಲಾ ಡ್ಯಾಂಗಳ ಸ್ಟ್ರೆಂತ್ ಬಗ್ಗೆ ಪರೀಶಿಲನೆ ಮಾಡುತ್ತೇವೆ. ಮುಡಾ ಹಗರಣ (Muda Case) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಡಾ ಕೇಸ್ ಪಿಸಿ ಆಕ್ಟ್‌ನಲ್ಲಿಯೇ ಬರುವುದಿಲ್ಲ. ಆದರೆ, ರಾಜ್ಯಪಾಲರನ್ನು ಈ ವಿಚಾರದಲ್ಲಿ ಕರೆ ತಂದಿದ್ದಾರೆ. ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎನ್ನುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಶೋಕ ನಾಯಕತ್ವವನ್ನು ಹಲವರು ಒಪ್ಪುತ್ತಿಲ್ಲ. ಹೀಗಾಗಿ ಅವರು ದೆಹಲಿ ಚಲೋ ಮಾಡಬೇಕು ಎಂದು ಗುಡುಗಿದ್ದಾರೆ.