ಅಮೆರಿಕವನ್ನು ಕೊರೊನಾ ವೈರಸ್ ಅಲ್ಲೋಲ-ಕಲ್ಲೋಲ ಮಾಡಿ 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾತ್ರ ಸೋಂಕಿನ ಲವಲೇಶ ಭಯವೂ ಇಲ್ಲ. ಇದೇ ಕಾರಣಕ್ಕಾಗಿ ಅವರು ಕಳೆದ ಐದು ತಿಂಗಳಿನಿಂದ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಅಮೆರಿಕ ಅಧ್ಯಕ್ಷರು ಖುದ್ದು ಎರಡು ಬಾರಿ ಕೊರೊನಾ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ. ಫಲಿತಾಂಶ ನೆಗಿಟಿವ್. ಆದರೂ ಇವರು ಎಲ್ಲಿಯೂ ಕೂಡ ಮಾಸ್ಕ್ ಧರಿಸಿದ ನಿದರ್ಶನಗಳಿಲ್ಲ.
ಇದೀಗ ಅಮೆರಿಕಕ್ಕೆ ಕೊರೊನಾ ದಾಳಿ ಮಾಡಿದ ನಂತರ ಇದೇ ಮೊದಲ ಬಾರಿಗೆ ವಾಷಿಂಗ್ಟನ್ ನಿಂದ ಆರಿಜೋನಾ ಪ್ರಾಂತ್ಯಕ್ಕೆ ಟ್ರಂಪ್ ಭೇಟಿ ನೀಡಿದರು. ಈ ವೇಳೆ ಹನಿವೆಲ್ಸ್ ವೈದ್ಯಕೀಯ ಉಪಕರಣಗಳ ತಯಾರಿಕಾ ಸಂಸ್ಥೆಗೆ ಭೇಟಿ ನೀಡಿ ಮಾಸ್ಕ್ ಗಳ ಉತ್ಪಾದನೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಉನ್ನತಾಧಿಕಾರಿಗಳು ಮಾಸ್ಕ್ ನೀಡಿದರೂ ಅದನ್ನು ಟ್ರಂಪ್ ಧರಿಸಲಿಲ್ಲ. ಬಳಿಕ ಸುದ್ದಿಗಾರರೊಂದಿಗೆ ಟ್ರಂಪ್ ಮಾತನಾಡಿದರು, ಈ ವೇಳೆ ಪತ್ರಕರ್ತರು ಮಾಸ್ಕ್ ಧರಿಸದ ಬಗ್ಗೆ ಪ್ರಶ್ನೆ ಕೇಳಿದಾಗ ನಾನು ಮಾಸ್ಕ್ ಧರಿಸುವುದಿಲ್ಲ ಎಂದರು.








