ದೆಹಲಿ : ಕೊರೊನಾ ವೈರಸ್ ಹೊಡೆತಕ್ಕೆ ಜನರ ಬದುಕು ಬರ್ಬಾದ್ ಆಗಿಬಿಟ್ಟಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನ ಅಕೌಂಟ್ ಗೆ ತಲಾ ಒಂದು ಸಾವಿರ ರೂಪಾಯಿಗಳನ್ನು ಹಾಕಬೇಕು ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
ಲಿಟ್ರೇಚರ್ ಫೆಸ್ಟ್ ಒಂದರಲ್ಲಿ ವಿಡಿಯೋ ಕಾನ್ಫರೆನ್ಸ್ ನ ಮೂಲಕ ಮಾತನಾಡಿದ ಅವರು, ಕೊರೊನಾ ಲಾಕ್ ಡೌನ್ ನಿಂದಾಗಿ ಜನರ ಬಳಿ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಕೂಡಲೇ ಮೋದಿ ಸರ್ಕಾರ ಒಂದು ದೇಶದ ಒಂದು ರೇಷನ್ ಕಾರ್ಡ್ ನ್ನ ಜಾರಿಗೆ ತರಬೇಕು. ಇದರಿಂದ ಜನರಿಗೆ ಬೇಕಿರುವ ಮೂಲವಸ್ತುಗಳನ್ನು ಪೊರೈಸಲು ಸಾಧ್ಯವಾಗುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ತಿಂಗಳು-ತಿಂಗಳು ಒಂದು ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟಕ್ಕೀಡಾಗಿರುವ ಈ ಪರಿಸ್ಥಿತಿಯಲ್ಲಿ, ಹಣಕಾಸಿನ ನೆರವು ನೀಡುವುದಕ್ಕೆ ಸರ್ಕಾರ ಹಿಂದೆ ಮುಂದೆ ನೋಡಬಾರದು. ಅರ್ಥವ್ಯವಸ್ಥೆ ಚೇತರಿಕೆ ಕಾಣಬೇಕು ಎಂದರೆ ಬೇಡಿಕೆ ಹೆಚ್ಚಾಗಬೇಕು. ಬೇಡಿಕೆ ಹೆಚ್ಚಾಗಲು ಜನರ ಬಳಿ ದುಡ್ಡಿರಬೇಕು. ಹೀಗಾಗಿ ಪ್ರತಿ ತಿಂಗಳು ಸರ್ಕಾರ ಪ್ರತಿ ಭಾರತೀಯನ ಅಕೌಂಟ್ ಗೆ 1 ಸಾವಿರ ರೂಪಾಯಿಯನ್ನು ಹಾಕಬೇಕು. ಹಾಗೇ ಸದ್ಯ ಖಾಲಿ ಕೈಯಲ್ಲಿರುವ ಜನರ ಕೈಗೆ ದುಡ್ಡು ಕೊಟ್ಟರೇ, ಅವರದನ್ನು ಖರ್ಚು ಮಾಡುತ್ತಾರೆ. ಅದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತೆ ಎಂದು ಅಭಿಜಿತ್ ಬ್ಯಾನರ್ಜಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.








