ನವದೆಹಲಿ: ಸಸ್ಯಾಹಾರಿ ಎಂದು ಮಾರಾಟವಾಗುತ್ತಿದ್ದ ಪತಂಜಲಿ (Patanjali) ಬ್ರ್ಯಾಂಡ್ ನ ಹರ್ಬಲ್ ಟೂತ್ ಪೌಡರ್ ‘ದಿವ್ಯ ಮಂಜನ್’ನಲ್ಲಿ ಮಾಂಸಾಹಾರಿ ಅಂಶ ಪತ್ತೆಯಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಕೆಯಾಗಿದ್ದು, ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ದೆಹಲಿ ಹೈಕೋರ್ಟ್ ಗೆ (Delhi High Courtt) ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಿರುವ ಹೈಕೋರ್ಟ್ ಪತಂಜಲಿ ಕಂಪನಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವಕೀಲ ಯತಿನ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದು, ಪತಂಜಲಿಯ ದಿವ್ಯ ಮಂಜನ್ (Divya Manjan) ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳನ್ನು ಸೂಚಿಸುವ ಹಸಿರು ಚುಕ್ಕೆಯನ್ನು ಹೊಂದಿದೆ. ಹೀಗಾಗಿ ದೀರ್ಘಕಾಲದಿಂದ ಬಳಸುತ್ತಿದ್ದೇವೆ. ಆದರೆ ಈ ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ ಅಥವಾ ಮೀನಿನ ಸಾರ ಇದೆ ಎಂದು ಸಂಶೋಧನೆ ಹೇಳಿದೆ. ದಿವ್ಯ ಮಂಜನ್’ನಲ್ಲಿ ಸಮುದ್ರಫೆನ್ ಪ್ರಾಣಿ ಆಧಾರಿತ ಉತ್ಪನ್ನವಾಗಿದೆ ಎಂದು ರಾಮ್ ದೇವ್ ಕೂಡ ಯೂಟ್ಯೂಬ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇದರಿಂದಾಗಿ ಗ್ರಾಹಕರ ಧಾರ್ಮಿಕ ನಂಬಿಕೆಗಳು ಹಾನಿಯಾಗಿದೆ. ಈ ಸಂಶೋಧನೆಯು ತನಗೆ ಮತ್ತು ಕುಟುಂಬಕ್ಕೆ ವಿಶೇಷವಾಗಿ ದುಃಖಕರವಾಗಿದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ದೆಹಲಿ ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಅರ್ಜಿಯನ್ನು ಕೈಗೆತ್ತಿಕೊಂಡ ನಂತರ ದೆಹಲಿ ಹೈಕೋರ್ಟ್ ಪತಂಜಲಿ ಆಯುರ್ವೇದ, ಬಾಬಾ ರಾಮದೇವ್, ಕೇಂದ್ರ ಸರ್ಕಾರ ಮತ್ತು ಉತ್ಪನ್ನವನ್ನು ತಯಾರಿಸುವ ಪತಂಜಲಿಯ ದಿವ್ಯ ಫಾರ್ಮಸಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ವಿಚಾರಣೆಯನ್ನು ಮುಂದೂಡಲಾಗಿದೆ.