ಜೋಶಿ ಅಲ್ಲ.. ಬೆಲ್ಲದ್ ಅಲ್ಲ.. ಯಂಗ್ & ಎನರ್ಜಿಟಿಕ್ ಲೀಡರ್ ಗೆ `ಹೈ’ ಮಣೆ..?
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಯಾದ ಎರಡನೇ ವರ್ಷದ ದಿನದಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ ವೈ ಜುಲೈ 26ರಂದು ರಾಜ್ಯಪಾಲರನ್ನು ಭೇಟಿ ಆಗಲಿದ್ದು, ಅವತ್ತೆ ತಾಂತ್ರಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಅನ್ನುವ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಇದು ನಿಜವೇ ಆದ್ರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು..? ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನ ತುಂಬುವ ಆ ನಾಯಕರು ಯಾರು..? ಅನ್ನೋ ಪ್ರಶ್ನೆ ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಸುತ್ತಾಡುತ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ ನೀಡ್ತಾರೆ ಅನ್ನೋ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಮುಂದಿನ ಸಿಎಂ ರೇಸ್ ನಲ್ಲಿ ಒಂದಿಷ್ಟು ಮಂದಿಯ ಹೆಸರುಗಳು ಕೇಳಿಬರುತ್ತವೆ. ಅದರಲ್ಲಿ ಮುಖ್ಯವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಅಶ್ವಥ್ ನಾರಾಯಣ್ ಹೀಗೆ ಇನ್ನು ಕೆಲವರ ಹೆಸರುಗಳು ಸಿಎಂ ರೇಸ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಈಗಲೂ ಕೂಡ ಈ ಹೆಸರುಗಳೇ ಸಿಎಂ ರೇಸ್ ನಲ್ಲಿವೆ.
ಆದ್ರೆ… ಹೈಕಮಾಂಡ್ ಲೆಕ್ಕಾಚಾರವೇ ಬೇರೆ ಇದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಮುಖ್ಯ ಕಾರಣ ಅವರ ವಯಸ್ಸು ಮತ್ತು ಪಕ್ಷದ ಭವಿಷ್ಯದ ದೃಷ್ಠಿಯಿಂದ. ಅಂದರೇ ಯಡಿಯೂರಪ್ಪ ಅವರ ನಂತರ ರಾಜ್ಯ ಬಿಜೆಪಿಗೆ ಒಬ್ಬ ಮಾಸ್ ಲೀಡರ್ ನ ಅವಶ್ಯಕತೆ ಇದೆ. ಒಬ್ಬ ಪ್ರಬಲ ಯುವ ನಾಯಕನಿಗೆ ಪಾರ್ಟಿಯಲ್ಲಿ ಪ್ರಮುಖ ಹುದ್ದೆ ಕೊಟ್ಟರೇ ಪಾರ್ಟಿಗೆ ಭವಿಷ್ಯ ಇರುತ್ತದೆ ಅನ್ನೋದು ಬಿಜೆಪಿ ಬಿಗ್ ಬಾಸ್ ಗಳ ಲೆಕ್ಕಾಚಾರವಾಗಿದೆ.
ಈ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ ಹೆಸರುಗಳು ಸೈಡ್ ಆಗುತ್ತವೆ. ಅಂದ್ರೆ 60ರ ಆಸುಪಾಸಿನಲ್ಲಿರುವ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಸಿಗೋದು ಡೌಟು. ಇನ್ನುಳಿದಂತೆ ಅರವಿಂದ್ ಬೆಲ್ಲದ್ ವಿಚಾರಕ್ಕೆ ಬಂದ್ರೆ ಇವರ ರಾಜ್ಯವ್ಯಾಪಿಯಾಗಿ ಅಷ್ಟೊಂದು ಹೆಸರುವಾಸಿ ಅಲ್ಲ. ಉತ್ತರದಲ್ಲಿ ಒಂದಿಷ್ಟು ಪ್ರಭಾವ ಹೊಂದಿದ್ದಾರಷ್ಟೆ. ಒಂದು ವೇಳೆ ಉತ್ತರ ಕರ್ನಾಟಕದವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸೋಕೆ ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ ಅಂತ ಅಂದುಕೊಂಡರೂ ರಾಜ್ಯವ್ಯಾಪಿ ಪರಿಚಯ ಇರುವ ನಾಯಕರು ಸಿಗೋದು ಕಷ್ಟ. ಹೀಗಾಗಿ ಬಿಜೆಪಿಯ ಬಿಗ್ ಬಾಸ್ ಗಳು ಬೇರೆಯದ್ದೇ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿ.ಟಿ.ರವಿ ಅಥವಾ ತೇಜಸ್ವಿ ಸೂರ್ಯಗೆ ಒಲಿಯುತ್ತಾ ಅದೃಷ್ಠ
ಹೌದು.. ಸದ್ಯ ಕುತೂಹಲಕ್ಕೆ ಕಾರಣವಾಗಿರುವ ಪ್ರಶ್ನೆ ಇದು..! ಯಾಕೆಂದ್ರೆ ರಾಜ್ಯದಲ್ಲಿ ಬಿಜೆಪಿಗೆ ಬೇಕಿರೋದು ಯುವ ನೇತಾರರು. ಕನಿಷ್ಠ ಅಂದರೂ 15 ರಿಂದ 20 ವರ್ಷ ಪಕ್ಷವನ್ನು ಮುನ್ನೆಡೆಸುವ ನಾಯಕರು ಬೇಕಾಗಿದ್ದಾರೆ. ಜೊತೆಗೆ ಹೊಸ ತಂಡದ ರಚನೆಯ ಅವಶ್ಯಕತೆಯೂ ಪಕ್ಷಕ್ಕಿದೆ. ಹೀಗಾಗಿ ಸದ್ಯ ರಾಷ್ಟ್ರೀಯ ಜವಾಬ್ದಾರಿ ಹೊತ್ತಿರುವ ಸಿ.ಟಿ.ರವಿ ಅಥವಾ ತೇಜಸ್ವಿ ಸೂರ್ಯಗೆ ಅವಕಾಶ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿ ಏನಂದರೇ ಈ ಇಬ್ಬರೂ ರಾಜ್ಯವ್ಯಾಪಿ ಪರಿಚಯ ಇದ್ದಾರೆ. ಇವರಿಗೆ ಯುವಕರನ್ನು ಸೆಳೆಯುವ ತಾಕತ್ತಿದೆ. ಸಂಘ ಪರಿವಾರ ಅಭಯಯೂ ಇವರ ಮೇಲಿದೆ. ಈ ಕಾರಣಕ್ಕಾಗಿ ಒಂದು ವೇಳೆ ಬಿಜೆಪಿ ಹೈಕಮಾಂಡ್ ಕ್ರಾಂತಿಕಾರಿಕ ಬದಲಾವಣೆ ಮಾಡಿದ್ದೇಯಾದಲ್ಲಿ ಈ ಇಬ್ಬರಲ್ಲಿ ಒಬ್ಬರಿಗೆ ಅದೃಷ್ಠ ಖುಲಾಯಿಸೋದು ಪಕ್ಕಾ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.