ನವದೆಹಲಿ : ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ಆತಂಕ ಸೃಷ್ಟಿಸಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ತಂದೊಡ್ಡಿದೆ. ಕೊರೊನಾಸುರ ದೇಶದಲ್ಲಿ ತನ್ನ ಕಬಂದಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಿದ್ದು, ಈಗಾಗಲೇ 14 ಸಾವಿರ ಮಂದಿಗೆ ಸೋಂಕು ತಗುಲಿದೆ. ಏತನ್ಮಧ್ಯೆ ಕೊರೊನಾ ವೈರಸ್ ದೇಶದ ದೊಡ್ಡ ಸವಾಲಾಗಿದ್ದು, ಅದೇ ಸಂದರ್ಭ ಉತ್ತಮ ಅವಕಾಶವೂ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಕೊರೊನಾ ಸಾಂಕ್ರಾಮಿಕ ರೋಗವು ದೊಡ್ಡ ಸವಾಲಾಗಿದೆ ಆದರೆ ಇದು ಒಂದು ಅವಕಾಶ ಕೂಡಾ ಆಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಾವೀನ್ಯ ಪರಿಹಾರಗಳ ಕುರಿತಾಗಿ ಕೆಲಸ ಮಾಡಲು ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಡೇಟಾ ತಜ್ಞರನ್ನು ಒಗ್ಗೂಡಿಸಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಎರಡು ದಿನಗಳ ಹಿಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದ ಕಾಂಗ್ರೆಸ್ ನಾಯಕ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಯುವುದಿಲ್ಲ. ಇದರಿಂದ ಸೋಂಕು ವಿಪರೀತವಾಗಿ ಹರಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.








