ವಾಹ್ಹ್,.. ಆಧುನಿಕ ಟೆನಿಸ್ ಜಗತ್ತಿನ ತ್ರಿಮೂರ್ತಿಗಳು.. ಫೆಡರರ್, ನಡಾಲ್ ದಾಖಲೆ ಸಾಲಿಗೆ ಜಾಕೊವಿಕ್ ಸೇರ್ಪಡೆ…!
ಸರ್ಬಿಯಾದ ನೊವಾಕ್ ಜಾಕೊವಿಕ್ ಹೆಸರು 2021ನೇ ಸಾಲಿನ ವಿಂಬಲ್ಡನ್ ಚಾಂಪಿಯನ್‍ಷಿಪ್ ಬೋರ್ಡ್ ನಲ್ಲಿ ಕಾಣಿಸಿಕೊಂಡಿದೆ.
2021ರ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ಇದೀಗ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿರುವ ನೊವಾಕ್ ಜಾಕೊವಿಕ್ ವಿಶ್ವ ಟೆನಿಸ್ ನಲ್ಲಿ ಹೊಸ ದಾಖಲೆಯ ಪುಟಕ್ಕೂ ಸೇರ್ಪಡೆಯಾಗಿದ್ದಾರೆ.
ಆಲ್ ಇಂಗ್ಲೆಂಡ್ ಟೆನಿಸ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-7, 6-4, 6-4, 6-3ರಿಂದ ಇಟಲಿಯ ಮ್ಯಾಟೊ ಬ್ಯಾರಟಿನಿ ಅವರನ್ನು ಪರಾಭಗೊಳಿಸಿದ್ರು.
ಆರನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜಾಕೊವಿಕ್ ಈಗ ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ ಸಾಲಿಗೂ ಸೇರಿಕೊಂಡಿದ್ದಾರೆ.
ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಹಾಗೇ ನೊವಾಕ್ ಜಾಕೊವಿಕ್ ಅವರು ಈ ವರ್ಷ ಸತತ ಮೂರು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದುಕೊಂಡು ಪ್ರಶಸ್ತಿಗಳ ಸಂಖ್ಯೆಯನ್ನು 20ಕ್ಕೇರಿಸಿಕೊಂಡಿದ್ದಾರೆ.
ನೊವಾಕ್ ಜಾಕೊವಿಕ್ ಅವರು 9 ಬಾರಿ ಆಸ್ಟ್ರೇಲಿಯನ್ ಓಪನ್, ಆರು ಬಾರಿ ವಿಂಬಲ್ಡನ್ ಮತ್ತು ಎರಡು ಬಾರಿ ಫ್ರೆಂಚ್ ಓಪನ್ ಹಾಗೂ ಮೂರು ಬಾರಿ ಯಎಸ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ.
ಹಾಗೇ, ರೋಜರ್ ಫೆಡರರ್ ಅವರು ಆರು ಬಾರಿ ಆಸ್ಟ್ರೇಲಿಯನ್ ಓಪನ್, ಒಂದು ಬಾರಿ (2009) ಫ್ರೆಂಚ್ ಓಪನ್, ಎಂಟು ಬಾರಿ ವಿಂಬಲ್ಡನ್ ಹಾಗೂ ಐದು ಬಾರಿ ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2018ರ ಆಸ್ಟ್ರೇಲಿಯನ್ ಓಪನ್ ನಂತರ ರೋಜರ್ ಫೆಡರರ್ ಅವರು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿಲ್ಲ. 2017ರಲ್ಲಿ ದಾಖಲೆಯ ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಲದೆ 2008ರಲ್ಲಿ ಕೊನೆಯ ಬಾರಿ ಯುಎಸ್ ಓಪನ್ ಗೆದ್ದುಕೊಂಡಿದ್ದರು.
ಇನ್ನೊಂದೆಡೆ ರಫಲೆ ನಡಾಲ್ ಕೂಡ ದಾಖಲೆಯ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಒಂದು ಬಾರಿ (2009) ಆಸ್ಟ್ರೇಲಿಯನ್ ಓಪನ್, ಎರಡು ಬಾರಿ (2008, 2010) ನಾಲ್ಕು ಬಾರಿ ಯುಎಸ್ ಓಪನ್ ಹಾಗೂ ದಾಖಲೆಯ 13 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಕಳೆದ 15- 17 ವರ್ಷಗಳಲ್ಲಿ ಈ ಮೂವರು ಆಟಗಾರರು 60 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ಆಧುನಿಕ ಟೆನಿಸ್ ಜಗತ್ತನ್ನು ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜಾಕೊವಿಕ್ ಅವರು ಆಳುತ್ತಿದ್ದಾರೆ. ಅದರಲ್ಲಿ ಆರಂಭದ ದಿನಗಳಲ್ಲಿ ಫೆಡರರ್, ನಂತರ ರಫೆಲ್ ಇದೀಗ ಜಾಕೊವಿಕ್ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅದರಲ್ಲೂ ನೊವಾಕ್ ಜಾಕೊವಿಕ್ ಅವರು 329 ವಾರಗಳಿಂದ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ, ಇನ್ನು ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯತ್ತ ಎಲ್ಲರ ಚಿತ್ತ ಬಿದ್ದಿದೆ. ಯಾಕಂದ್ರೆ ಮುಂದಿನ ದಿನಗಳಲ್ಲಿ ಯಾರು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ತಾರೋ ಅವರು ವಿಶ್ವ ಟೆನಿಸ್ ನ ಮಹಾಶೂರನಾಗುತ್ತಾನೆ.








