ಕಳೆದು ಹೋದವೆಲ್ಲಿ ಆ ಬಾಲ್ಯ ! Children day 2020
ಮಂಗಳೂರು, ನವೆಂಬರ್14: ಮಕ್ಕಳ ದಿನಾಚರಣೆಯ ಸಡಗರದಲ್ಲಿ ಇದ್ದ ಮಕ್ಕಳನ್ನು ನೊಡುತ್ತಾ, ನಾನು ಒಂದು ಕ್ಷಣ ನನ್ನ ಬಾಲ್ಯಕ್ಕೆ ಜಾರಿದೆ. ಆ ಕಾಲ ಚಂದವೋ ಈ ಕಾಲ ಚಂದವೋ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿತು. Children day 2020
ಅಂದು ಕೂಡು ಕುಟುಂಬದಲ್ಲಿ ಬೆಳೆದ ನಮಗೆ ಪ್ರೀತಿಯ ಕೊರತೆ ಎಂದೂ ಕಾಡಲಿಲ್ಲ. ಏನೇ ಸಿಕ್ಕಿದರೂ ಅದನ್ನು ಹಂಚಿಕೊಳ್ಳುವ ಗುಣವಿತ್ತು. ಮನೆಯಲ್ಲಿ ಕೇಳಿದ ವಸ್ತು ಕೂಡಲೇ ಸಿಗುವ ವಾತಾವರಣವಿರದಿದ್ದರೂ ಇಂದಿನ ಮಕ್ಕಳಿಗಿಂತ ನಾವೇ ಸಂತೋಷವಾಗಿದ್ದೆವು.

ಈಗಿನ ಮಕ್ಕಳಂತೆ ಟ್ಯೂಷನ್ , ಕೋಚಿಂಗ್, ಇನ್ನಿತರ ತರಬೇತಿಗಳ ಜಂಜಾಟಗಳಿಲ್ಲದೇ, ಇಷ್ಟು ಅಂಕಗಳು ಬರಲೇ ಬೇಕು ಎನ್ನುವ ಪೋಷಕರ ಒತ್ತಡವಿಲ್ಲದೇ ಹಕ್ಕಿಗಳಂತೆ ಸ್ವಚ್ಛಂದ ಬದುಕು ನಮ್ಮದಾಗಿತ್ತು. ಅಂದು ಗಾಳಿಯಲ್ಲಿ ಹಾರಿ ಬರುತ್ತಿದ್ದ ಅಜ್ಜನ ಮೀಸೆಯನ್ನು ಊದಿ ಊದಿ ಮೇಲಕ್ಕೇರಿಸುತ್ತಿದ್ದಾಗ ಸಿಗುತ್ತಿದ್ದ ಖುಷಿ, ಕುಂಟೆಬಿಲ್ಲೆ, ಮರಕೋತಿ ಆಟ, ಲಗೋರಿ ಮುಂತಾದ ಆಟವಾಡಿ ಬಿದ್ದು ಎದ್ದು ಕೈಕಾಲುಗಳಿಗೆ ತರುಚಿದ ಗಾಯಗಳಾದರೂ ಲೆಕ್ಕಿಸದೆ, ಕೈ ಮೈ ಮಣ್ಣಾದರೂ ಸಿಗುತ್ತಿದ್ದ ಆನಂದ ಇಂದಿನ ಮಕ್ಕಳಿಗೆ ಎಲ್ಲಿದೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿತು.
ಕಡ್ಲೆ, ಚಿಕ್ಕಿ, ಪೆಪ್ಪರ್ ಮೆಂಟ್ , ಐದು ಹತ್ತು ಪೈಸೆಗಳಿಗೆ ಸಿಗುತ್ತಿದ್ದ ಆಕ್ರೂಟ್, ಐಸ್ ಕ್ಯಾಂಡಿ, ಸಿಹಿ ಗೋಲಿ ಸೋಡ.. ಆಹಾ ನನ್ನ ಬಾಲ್ಯ ಅದೆಷ್ಟು ಸುಂದರವಾಗಿತ್ತು.. ಹುಶಾರಿಲ್ಲದೇ ಮಲಗಿದಾಗ ಅಜ್ಜಿಯ ಆರೈಕೆ, ಅಜ್ಜನ ತಳಮಳ, ಮನೆಯವರೆಲ್ಲರ ಕಳವಳ , ಇದ್ದ ದೇವರುಗಳಿಗೆ ಅವರ ಹರಕೆಗಳು ಅನಾರೋಗ್ಯದಲ್ಲೂ ನಮಗೆ ಮುದ ನೀಡುತ್ತಿತ್ತು. ಎಲ್ಲರ ಕಣ್ಮಣಿಯಾಗಿದ್ದೇವೆ ಎನ್ನುವ ಖುಷಿ ಅನಾರೋಗ್ಯದ ಆಯಾಸವನ್ನು ಮರೆಸುತ್ತಿತ್ತು.

ಇಂದಿನ ಮಕ್ಕಳಿಗೆ ಬಾಲ್ಯವೆಂದರೆ ಹೋಲಿಕೆಗಳ ಜೀವನವಾಗಿದೆ. 99 ಅಂಕ ಬಂದರೂ ಸಂಭ್ರಮಿಸದೇ ಇನ್ನೊಬ್ಬನಿಗೆ 100 ಅಂಕ ಬಂದಿದೆಯಾ ಎಂದು ವಿಚಾರಿಸುವ, ನಿನಗೇಕೆ ಒಂದು ಅಂಕ ಕಡಿಮೆ ಬಂದಿದೆ ಎಂದು ಪ್ರಶ್ನಿಸುವ ಪೋಷಕರು ನಾವಾಗಿದ್ದೇವೆ. ಎಲ್ಲದರಲ್ಲೂ ಮೊದಲ ಸ್ಥಾನ ಬರಲೇಬೇಕು ಎನ್ನುವ ಒತ್ತಡವನ್ನು ನಾವೇ ಹೇರಿದ್ದೇವೆ. ಹಿಂದೆ ಚಂದಮಾಮನ ತೋರಿಸಿ ಊಟ ಮಾಡಿಸುತ್ತಿದ್ದರೆ, ಇಂದು ಮಗುವಿನ ಕೈಯಿಗೆ ಮೊಬೈಲ್ ಕೊಟ್ಟು ಊಟ ಮಾಡಿಸುತ್ತಿದ್ದೇವೆ. ಸಣ್ಣ ವಯಸ್ಸಿನಲ್ಲೇ ನಮ್ಮ ಮಕ್ಕಳನ್ನು ಟಿ.ವಿ.,ಮೊಬೈಲ್ ಗಳ ದಾಸರಾಗಿಸಿದ್ದೇವೆ.

ಇಂದಿನ ಮಕ್ಕಳಿಗೆ ಅಜ್ಜಿಯ ಕತೆಯ ಸವಿಯಿಲ್ಲ, ಸಂಬಂಧಿಕರ ಮನೆಗಳಿಗೆ ಹೋಗುವ ಆನಂದವಿಲ್ಲ. ಅಂದು ದೂರದ ಸಂಬಂಧಿಕರ ಮನೆಯ ಮಂಗಳಕಾರ್ಯಗಳಿಗೆ ವಾರಗಟ್ಟಲೇ ರಜೆ ಹಾಕಿ ಸಂಭ್ರಮಿಸುತ್ತಿದ್ದ ನಾವು ಇಂದು ನರ್ಸರಿಯಲ್ಲಿ ಓದುವ ನಮ್ಮ ಮಗುವಿಗೆ ತರಗತಿ ತಪ್ಪುತ್ತದೆ ಎಂಬ ಕಾರಣ ನೀಡಿ ಹತ್ತಿರ ಸಂಬಂಧದ ಮನೆಯ ಮಂಗಳ ಕಾರ್ಯಕ್ರಮಗಳಿಗೆ ಹೋಗದೆ ಸಂಬಂಧಗಳಿಂದ ಸಿಗುವ ಅನ್ಯೋನ್ಯತೆ ಭಾವದಿಂದ ವಂಚಿತರಾಗಿಸುತ್ತಿದ್ದೇವೆ. ಪ್ರಕೃತಿಯೊಂದಿಗೆ ಒಂದಾಗಿ ಬೆರೆಯುತ್ತಿದ್ದ ನಾವು ನಮ್ಮ ಮಕ್ಕಳ ವಿಷಯದಲ್ಲಿ ಸ್ವಾರ್ಥಿಗಳಾಗಿದ್ದೇವೆ. ಪಿಝ್ಝಾ , ಬರ್ಗರ್ ಮುಂತಾದ ಫಾಸ್ಟ್ ಫುಡ್ ಗಳು ಆಧುನಿಕ ಜೀವನ ಶೈಲಿಯ ಮೆನು ಕಾರ್ಡ್ ಗಳೆಂದು ಪರಿಗಣಿಸಿ ಮಕ್ಕಳನ್ನು ಅದಕ್ಕೆ ಮಾರು ಹೋಗುವ ಹಾಗೆ ಮಾಡಿ ಅವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದೇವೆ.

ಗೆಲ್ಲುವುದಷ್ಟೇ ಜೀವನದ ಪರಮಗುರಿ ಎಂದು ಮಕ್ಕಳಿಗೆ ಹೇಳ ಹೊರಟಿರುವ ನಾವು ಸೋಲು ಎನ್ನುವುದು ಕೂಡ ಬದುಕಿನ ಒಂದು ಭಾಗ ಎನ್ನುವುದನ್ನು ತಿಳಿಸಲು ಮರೆತ್ತಿದ್ದೇವೆ. ದುಡ್ಡೇ ದೊಡ್ಡಪ್ಪ ಎನ್ನುವ ಮರೀಚಿಕೆಯ ಹಿಂದೆ ಓಡುತ್ತಿರುವ ನಾವು ಪೋಷಕರಾಗಿ ಮಕ್ಕಳಿಗೆ ಜೀವನದ ಪಾಠ ತಿಳಿಸಲು ಮರೆತಿದ್ದೇವೆ.
ಬಹುಶಃ ಇಂದಿನ ಮಕ್ಕಳಿಗೆ ಅಸುರಕ್ಷತೆಯ ಭಾವ ಕಾಡುತ್ತಿರುವುದರಿಂದ ಸುಲಭವಾಗಿ ಅವರು ಡ್ರಗ್, ಕುಡಿತ, ಸಿಗರೇಟ್ ಮುಂತಾದ ಕೆಟ್ಟ ಚಟಗಳಿಗೆ ತಮ್ಮ ಸಣ್ಣ ವಯಸ್ಸಿನಲ್ಲೇ ಬಲಿಯಾಗುತ್ತಿದ್ದರೇನೋ ಎಂಬುವುದು ನನ್ನ ಅನಿಸಿಕೆ. ಆತ್ಮಹತ್ಯೆ, ಪೋಷಕರ, ಸಹಪಾಠಿಗಳ ಹತ್ಯೆ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಇಂದಿನ ಮಕ್ಕಳು ತೊಡಗಿರುವುದನ್ನು ನೋಡುವಾಗ ಪೋಷಕರಾಗಿ ನಾವು ಎಡವಿರುವುದೇ ಇದಕ್ಕೆ ಕಾರಣವೆನೋ ಎಂದು ಅನಿಸುತ್ತದೆ.

ಮಕ್ಕಳ ಮನಸ್ಸು ಹಸಿಮಣ್ಣಿನಂತೆ. ಅದನ್ನು ಯಾವ ರೂಪಕ್ಕಾದರೂ ತೀಡಿ ರೂಪ ಕೊಡಬಹುದು. ಸರಿಯಾದ ರೂಪದಲ್ಲಿ ತಿದ್ದಿ ತೀಡಿದಾಗ ಮಕ್ಕಳಿಗೆ ಎಂದೂ ಮರೆಯದ ಬಾಲ್ಯವೊಂದು ರೂಪುಗೊಳ್ಳಬಹುದು. ಮಕ್ಕಳಿಗೆ ಮಕ್ಕಳಾಟದ ಪ್ರೀತಿ ಲಭಿಸಲಿ, ಬಾಲ್ಯದ ಸವಿನೆನಪುಗಳನ್ನು ದೊಡ್ಡವರಾದ ಬಳಿಕವೂ ಮೆಲಕು ಹಾಕುವಂತಾಗಲಿ…
ಸಾಕ್ಷಾಟಿವಿ ವತಿಯಿಂದ ಮಕ್ಕಳ ದಿನಾಚರಣೆಯ ಶುಭಾಶಯಗಳು..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1327412965742526464?s=19








