ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ ನಾಗರಾಜ್ ಅವರು ಇಂದು ಹೊಸಕೋಟೆ ತಾಲೂಕಿನ ತಾವರೆಕೆರೆಗೆ ಬಾಗಿನ ಅರ್ಪಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು.
ವಿರೋಧ ಪಕ್ಷದವರು ಆರೋಪಗಳು, ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಯಾವ ಯಾವ ಕಾಲದಲ್ಲಿ ಯಾರ್ಯಾರು ಮುಖ್ಯಮಂತ್ರಿಗಳಾಗಿದ್ದರು. ಯಾವ ಮುಖ್ಯಮಂತ್ರಿ ಕಾಲದಲ್ಲಿ ಎಷ್ಟೆಷ್ಟು ಹಗರಣ ಆಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ರಾಜಕೀಯದಲ್ಲಿ ಯಾರೂ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜರು ಇಲ್ಲ ಎಂದು ಕೈ ನಾಯಕರ ವಿರುದ್ಧ ಗುಡುಗಿದರು.
ಮುಂದುವರಿದು ಮಾತನಾಡಿದ ಅವರು, ನನ್ನ ನಲವತ್ತು ವರ್ಷಗಳ ರಾಜಕೀಯದಲ್ಲಿ ಎಲ್ಲರನ್ನು ನೋಡಿದ್ದೇನೆ. ಆದರೆ ಸತ್ಯಹರಿಶ್ಚಂದ್ರ, ಧರ್ಮರಾಯ ಮತ್ತು ನಳ ಮಹಾರಾಜ ಯಾರೂ ನನ್ನ ಕಣ್ಣಿಗೆ ಬಿದ್ದಿಲ್ಲ. ಸದ್ಯಕ್ಕೆ ಆರೋಪ, ಪ್ರತ್ಯಾರೋಪಗಳನ್ನು ಬದಿಗೊತ್ತಿ. ಇಂದು ನಾವು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಮಾಡಿ, ಆದರೆ ಈ ಸಮಯದಲ್ಲಿ ಬೇಡ. ಶಾಸಕರು, ಸಚಿವರು, ಜನಪ್ರತಿನಿಧಿಗಳಾಗಲಿ ಎಲ್ಲರೂ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಉಸ್ತುವಾರಿ ವಹಿಸಿಕೊಂಡು ಕೊರೊನಾ ನಿಯಂತ್ರಿಸಲು ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಾಗರಾಜ್, ವಿರೋಧ ಪಕ್ಷದವರು ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ಆರೋಪವನ್ನು ತಳ್ಳಿ ಹಾಕಿದರು. ಅಲ್ಲದೇ ನಮ್ಮ ಬಳಿ ಎಲ್ಲದಕ್ಕೂ ದಾಖಲಾತಿ ಇದೆ. ಆದರೆ ಈಗ ರಾಜಕೀಯ ಮಾಡುವ ಸಮಯವಲ್ಲ. ಚುನಾವಣೆ ಬರುತ್ತದೆ ಅಂದು ರಾಜಕೀಯ ಮಾಡಿ. ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದೆ. ಆದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಕಿಡಿಕಾರಿದರು.








