ಬೆಂಗಳೂರು: ಮಾಜಿ ಪತ್ನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದ ಖಾಸಗಿ ಕಂಪನಿ ಉದ್ಯೋಗಿಗೆ 1 ತಿಂಗಳು ಸಾದಾ ಜೈಲು, 45 ಸಾವಿರ ರೂ. ದಂಡ ವಿಧಿಸಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ರಾಘವನ್ ಸಂಪತ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2017 ರಲ್ಲಿ ಅಶ್ಲೀಲ ವಿಡಿಯೊ ಕಳುಹಿಸಿ, ಗೌರವಕ್ಕ ಧಕ್ಕೆ ತರುವಂತೆ ಬರೆದಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯು ಆರೋಪಿ ವಿರುದ್ಧ ದೂರು ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಅಧಿಕಾರಿಗಳು ರಾಘವನ್ ವಿರುದ್ಧ ಐಟಿ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಸಂತ್ರಸ್ತೆ 2016 ರಲ್ಲಿ ನಗರಕ್ಕೆ ಬಂದು ಸಂಪತ್ ನನ್ನು ವಿವಾಹವಾಗಿದ್ದರು. ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಸಂತ್ರಸ್ತೆ ಕೆಲಸದ ಸಲುವಾಗಿ ಪುನಃ ವಿದೇಶಕ್ಕೆ ಹೋಗಿದ್ದರು. ಆದರೆ, ಈತ ಅಶ್ಲೀಲ ವಿಡಿಯೋ ಕಳುಹಿಸಿದ್ದಾನೆ. ಸಂತ್ರಸ್ತೆ ಸಹೋದರನೇ ಮೊದಲಿಗೆ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿದೇಶದಿಂದ ಬಂದ ನಂತರ ಸಂತ್ರಸ್ತೆಯೂ ಪ್ರತ್ಯೇಕ ದೂರು ದಾಖಲಿಸಿ ಹೇಳಿಕೆ ನೀಡಿದ್ದರು.