ಮೈಸೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗಷ್ಟೇ ಕರುಗಳ ಕೆಚ್ಚಲು ಕತ್ತರಿಸಿ, ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ.
ನಂಜನಗೂಡಿನಲ್ಲಿ (Nanjanagudu) ಮಾರಕಾಸ್ತ್ರಗಳಿಂದ ಹಸುವಿನ ಬಾಲ ಕತ್ತರಿಸಿರುವ ಘಟನೆ ನಡೆದಿದೆ. ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೆ ಹರಕೆ ರೂಪದಲ್ಲಿ ಭಕ್ತರು ಹಸುಗಳನ್ನು ದಾನವಾಗಿ ನೀಡುತ್ತಾರೆ. ಹೀಗೆ ದಾನ ನೀಡಿದ ಹಸುಗಳು ದೇವಸ್ಥಾನದ ಆವರಣದಲ್ಲೇ ಇರುತ್ತವೆ. ಹೀಗೆ ಇದ್ದ ಹಸುಗಳನ್ನು ಕದಿಯಲು ಇವತ್ತು ಬೆಳಗಿನ ಜಾವ ಕಳ್ಳ ಬಂದಿದ್ದಾನೆ. ಕಳ್ಳನಿಂದ ಹಸು ತಪ್ಪಿಸಿಕೊಳ್ಳಲು ಮುಂದಾದಾಗ ಮಚ್ಚಿನಿಂದ ಹಸುವಿನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಗ ಬಾಲಕ್ಕೆ ಬಿದ್ದು, ಬಾಲ ತುಂಡಾಗಿ ಹಸುವಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ.
ಸ್ಥಳೀಯರು ಕೂಡಲೇ ಹಸುವನ್ನು ರಕ್ಷಿಸಿದ್ದಾರೆ. ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಸದ್ಯ ಹಸು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಆಗ್ರಹಿಸಲಾಗಿದೆ.