ನಟ ಪ್ರಕಾಶ್ ರಾಜ್ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಿನ್ನಯ್ಯನೊಂದಿಗೆ ಮಾತನಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಚಿನ್ನಯ್ಯ ನನ್ನೊಂದಿಗೆ ಮಾತನಾಡಿದ್ದು ನಿಜ. ಆತ ನನ್ನ ಜೊತೆ ತಮಿಳು ಭಾಷೆಯಲ್ಲಿ ಮಾತನಾಡಿದ್ದ. ಈ ವಿಷಯವನ್ನು ಆತ ನ್ಯಾಯಾಲಯದಲ್ಲಿಯೂ ಹೇಳಿಕೆ ರೂಪದಲ್ಲಿ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಗಿರೀಶ್ ಮಟ್ಟಣ್ಣನವರ್ ಹೇಳಿದ ರೀತಿಯಲ್ಲಿ ಕೇಳಿದರೆ, ‘ನಾನು ನಿನ್ನನ್ನು ಅಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದೆ ಎಂದು ಚಿನ್ನಯ್ಯ ಕೋರ್ಟ್ನಲ್ಲಿ ಹೇಳಿದ್ದಾನೆ. ಅಲ್ಲದೆ, ಕೇರಳದಿಂದ ಹಣ ಬಂದಿದೆ ಎಂದು ಹೇಳುವ ವೇಳೆ ನನ್ನ ಹೆಸರನ್ನೂ ಉಲ್ಲೇಖಿಸಿದ್ದಾನೆ ಎಂದು ವಿವರಿಸಿದರು.
ಆದರೆ, ತಮ್ಮ ವಿರುದ್ಧದ ಇತರ ಆರೋಪಗಳನ್ನು ತಳ್ಳಿಹಾಕಿದ ಅವರು, ನಾನು ಇದುವರೆಗೂ ಗಿರೀಶ್ ಮಟ್ಟಣ್ಣನವರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಸತ್ಯಾಂಶಗಳು ಕಾನೂನು ಪ್ರಕ್ರಿಯೆಯ ಮೂಲಕವೇ ಹೊರಬರಲಿವೆ. ಈ ನಡುವೆ ಪ್ರಕಾಶ್ ರಾಜ್ ಅವರ ಹೇಳಿಕೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.








