ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಕರೆದಿದ್ದ ಸುದ್ದಿಗೋಷ್ಠಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೋಷ್ಠಿಗೆ ಆಹ್ವಾನ ನೀಡುವಾಗ ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ ಎಂದು ಪ್ರಕಾಶ್ ರಾಜ್ ಬಳಸಿದ್ದ ಪದವು ಮಾಧ್ಯಮ ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಯಿತು. ಇದು ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ವಾಕ್ಸಮರ ಮತ್ತು ವಾಗ್ವಾದಕ್ಕೆ ನಾಂದಿ ಹಾಡಿತು.
ಸುದ್ದಿಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಪತ್ರಕರ್ತರು ಮಾರಿಕೊಂಡವರು ಯಾರು ಎನ್ನುವುದನ್ನು ಸ್ಪಷ್ಟಪಡಿಸಬೇಕು ಅಥವಾ ಬೇಷರತ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ ನಾನು ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಈ ಪದ ಬಳಸಿಲ್ಲ. ಆದರೆ ನನ್ನ ವೈಯಕ್ತಿಕ ಖಾತೆಯಲ್ಲಿ ಮಾರಿಕೊಂಡವರಿಗೂ ಆಹ್ವಾನ ನೀಡಿದ್ದೇನೆ, ಏಕೆಂದರೆ ಅವರ ಪ್ರಶ್ನೆಗಳಿಗೂ ನಾನು ಉತ್ತರ ನೀಡಬೇಕಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ನಿಮಗೇನಾದರೂ ತಾಕತ್ತಿದ್ದರೆ, ಮರ್ಯಾದೆ ಇದ್ದರೆ ಮಾರಿಕೊಂಡವರು ಯಾರು ಎಂದು ಹೆಸರು ಹೇಳಿ ಎಂದು ಮಾಧ್ಯಮದವರು ಒತ್ತಾಯಿಸಿದಾಗ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದರು. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ರಾಜಕೀಯ ಆಯಾಮವನ್ನೂ ನೀಡಿದರು. ಭಾರತೀಯ ಪತ್ರಿಕೋದ್ಯಮದಲ್ಲಿ ಮಾರಿಕೊಂಡವರೂ ಇದ್ದಾರೆ ಮತ್ತು ಮಾರಿಕೊಳ್ಳದ ಪ್ರಾಮಾಣಿಕರೂ ಇದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ನಿಮ್ಮ ವರ್ತನೆ ಇದೆ ಎಂದು ಪ್ರಕಾಶ್ ರಾಜ್ ಪತ್ರಕರ್ತರನ್ನು ಕುಟುಕಿದರು. ನಾನು ಕರ್ನಾಟಕದ ಒಟ್ಟಾರೆ ಮಾಧ್ಯಮ ರಂಗದ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಮಾಧ್ಯಮ ರಂಗವನ್ನು ಹಾಳು ಮಾಡುತ್ತಿರುವ ಕೆಲವು ಮಾರಿಕೊಂಡ ವ್ಯಕ್ತಿಗಳ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧನಿದ್ದೇನೆ. ಪ್ರೆಸ್ ಮೀಟ್ ಕರೆಯದೆ ಓಡಿ ಹೋಗಲು ನಾನು ಪ್ರಧಾನಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದರು.
ಕೊನೆಯವರೆಗೂ ಮಾರಿಕೊಂಡವರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ದೇವನೂರ ಮಹಾದೇವ ಅವರ ಮಾರಿಕೊಂಡವರು ಕಥೆಯನ್ನು ಓದಿ, ಆಗ ನಿಮಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಹೇಳಿ ಚರ್ಚೆಯನ್ನು ತೇಲಿಸಿದರು. ಕೆಲವು ಪತ್ರಕರ್ತರಿಗೆ ಸತ್ಯ ಬರೆಯುವ ಆಸೆ ಇದೆ, ಆದರೆ ಮಾಲೀಕರ ಒತ್ತಡದಿಂದ ಅವರು ಸುಮ್ಮನಿದ್ದಾರೆ ಎಂಬ ಗಂಭೀರ ಆರೋಪ ಮಾಡುವ ಮೂಲಕ ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ಸಂಚಲನ ಮೂಡಿಸಿದರು.








