ಹೈದರಾಬಾದ್: ಲಂಚ ಸ್ವೀಕರಿಸುವ ವೇಳೆ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದು, ಕಣ್ಣೀರು ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಡಕಟ್ಟು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಜಗಜ್ಯೋತಿ 84 ಸಾವಿರ ರೂ. ಲಂಚ ಪಡೆಯುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರು ಈ ಕುರಿತು ಎಸಿಬಿಗೆ ದೂರು ನೀಡಿದ್ದರು. ಇದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ಬಂಧಿಸಿದ್ದಾರೆ.
ಜಗಜ್ಯೋತಿ ಅವರನ್ನು ಫಿನಾಲ್ಫ್ಥಲೀನ್ ಪರೀಕ್ಷೆಗೆ ಎಸಿಬಿ ಅಧಿಕಾರಿಗಳು ಒಳಪಡಿಸಿದಾಗ ಅವರು ಲಂಚ ಪಡೆದಿರುವುದು ಸಾಬೀತಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು 84 ಸಾವಿರರೂ. ವಶಕ್ಕೆ ಪಡೆದು, ಹೈದರಾಬಾದ್ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.