ಓ.. ಅಭಿಮಾನಿ…ನಿನಗೆ ಯಾರೂ ಹೀರೋ ಅಲ್ಲ.. ನಿನಗೆ ನೀನೇ ಹೀರೋ.. ಅಷ್ಟೇ ಕಣೋ ಬದುಕು (ಕ್ರೀಡಾ ಲೋಕದ ಮಹಾದುರಂತಗಳು)
ಅಂದು ಆಗಸ್ಟ್ 16, 1980, ಇಂದು ಜೂನ್ 4, 2025
ಅವತ್ತು ಈಡನ್ ಗಾರ್ಡನ್… ಇವತ್ತು ಗಾರ್ಡನ್ ಸಿಟಿ..!
ಆಗ ಸತ್ತವರ ಸಂಖ್ಯೆ 16, ಈಗ ಸತ್ತವರ ಸಂಖ್ಯೆ 11
ಅದು ಫುಟ್‍ಬಾಲ್ ಆಟ, ಇದು ಕ್ರಿಕೆಟ್ ಆಟ
ಆಗಲೂ ಆಗಿದ್ದು ಕಾಲ್ತುಳಿತ.. ಈಗಲೂ ಆಗಿದ್ದು ಕಾಲ್ತುಳಿತ..!
ಅವತ್ತಿನ ಘಟನೆಗೆ ಕಾರಣ ಫುಟ್‍ಬಾಲ್ ಅಭಿಮಾನಿಗಳ ನಡುವಿನ ಹುಚ್ಚಾಟದ ಸಂಘರ್ಷ
ಇವತ್ತಿನ ಘಟನೆಗೆ ಕಾರಣ ಲಕ್ಷಾಂತರ ಆರ್‍ಸಿಬಿ ಅಭಿಮಾನಿಗಳ ಅಂಧಾಭಿಮಾನ..!
ಆ ಕೊಲ್ಕತ್ತಾ ದುರ್ಘಟನೆಗೂ ಪೊಲೀಸ್ ಇಲಾಖೆಯನ್ನೇ ಬೊಟ್ಟು ಮಾಡಿ ತೋರಿಸಲಾಗಿತ್ತು.
ಈ ಬೆಂಗಳೂರಿನ ದುರ್ಘಟನೆಗೂ ಪೊಲೀಸ್ ಇಲಾಖೆಯ ಮೇಲೆಯೇ ಕೈ ತೋರಿಸಲಾಗುತ್ತಿದೆ.
ಆಗಿನ ಕಾಲದಲ್ಲಿ ಭಾರತದಲ್ಲಿ ಫುಟ್‍ಬಾಲ್ ಕ್ರೇಜ್ ಜಾಸ್ತಿ
ಈಗಿನ ಭಾರತದಲ್ಲಿ ಎಲ್ಲಿ ನೋಡಿದ್ರಲ್ಲಿ ಕ್ರಿಕೆಟ್ ಆಟವೇ ಅಚ್ಚುಮೆಚ್ಚು
ಅಲ್ಲಿ ಆಗಸ್ಟ್ 16, (ಕೊಲ್ಕತ್ತಾದ ಪಾಲಿಗೆ) ಫುಟ್‍ಬಾಲ್ ಪ್ರೇಮಿಗಳ ದಿನ
ಇಲ್ಲಿ ಜೂನ್ 4- (ಬೆಂಗಳೂರಿಗರಿಗೆ) ಆರ್‍ಸಿಬಿ ಅಭಿಮಾನಿಗಳ ದಿನವಾಗುತ್ತಾ..?
saakshatv.com
ಹೌದು, ಭಾರತದಲ್ಲಿ ಈ ಎರಡು ಮಹಾ ದುರಂತಗಳು ನಡೆದಿದ್ದು ಹುಚ್ಚು ಅಭಿಮಾನದಿಂದ. ಸುಮಾರು 45 ವರ್ಷಗಳ ಹಿಂದೆ ಕೊಲ್ಕತ್ತಾದ ಈಡನ್ ಗಾರ್ಡನ್ ಅಂಗಣದಲ್ಲಿ ಭಾರತದ ಮೊದಲ ಕ್ರೀಡಾ ಮಹಾ ದುರಂತವೊಂದು ನಡೆದಿತ್ತು. ಇದೀಗ ಎರಡನೇ ಕ್ರೀಡಾ ಮಹಾ ಅವಘಢಕ್ಕೆ ಸಾಕ್ಷಿಯಾಗಿದೆ ನಮ್ಮ ಬೆಂಗಳೂರು. (RCB)
ಅದೊಂದು ದುರಂತ ನಡೆದಿದ್ದು 1980, ಆಗಸ್ಟ್ 16ರ ಇಳಿ ಸಂಜೆಯ ವೇಳೆ. ಆ ಎರಡು ಬಲಿಷ್ಠ ತಂಡಗಳ ಜಿದ್ದಾಜಿದ್ದಿನ ಹೋರಾಟವನ್ನು ಫುಟ್‍ಬಾಲ್ ಡರ್ಬಿ ಅಂತನೇ ಕರೆಯಲಾಗುತ್ತದೆ. ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಾಗನ್ ತಂಡಗಳ ನಡುವಿನ ಕಾಳಗ ಅಂದ್ರೆ ಫುಟ್‍ಬಾಲ್ ಪ್ರೇಮಿಗಳ ಕಣ್ಣಿಗೆ ಹಬ್ಬ. ತಮ್ಮ ನೆಚ್ಚಿನ ಆmಗಾರರ ಆಟವನ್ನು ನೋಡಲು ಈಡನ್ ಗಾರ್ಡನ್ ಅಂಗಣದಲ್ಲಿ ಸುಮಾರು 70ಸಾವಿರ ಪ್ರೇಕ್ಷಕರು ಸೇರಿದ್ದರು.
ಇನ್ನೇನೂ, ಪಂದ್ಯ ರೋಚಕವಾಗಿ ಸಾಗುತ್ತಿದ್ದ ವೇಳೆ ಮೋಹನ್ ಬಾಗನ್ ತಂಡದ ಬಿದೇಶ್ ಬಸ್ ಅವರನ್ನು ಈಸ್ಟ್ ಬೆಂಗಾಲ್‍ನ ದಿಲೀಪ್ ಪಾಲಿಟ್ ನೆಲಕ್ಕುರಳಿಸಿದ್ರು. ಮೊದಲೇ ಒರಟಾಗಿ ಆಡುವ ಕುಖ್ಯಾತಿ ಪಡೆದಿದ್ದ ದಿಲೀಪ್ ಪಾಲಿಟ್ ಜೊತೆ ಬಿದೇಶ್ ಮಾತಿನ ಚಕಮಕಿ ನಡೆಸಿದ್ದರು. ಇದನ್ನು ನೋಡಿದ್ದ ಎರಡು ತಂಡಗಳ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಪರಸ್ಪರ ಕಲ್ಲು ತೂರಾಟ, ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
saakshatv.com
ಇದರಿಂದ ಭಯಭೀತರಾದ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ರು. ಪರಿಣಾಮ ಕಾಲ್ತುಳಿತದಿಂದ 16 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ನಡೆದಿದ್ದ ಈ ಘಟನೆಯನ್ನು ನಿಯಂತ್ರಿಸಲು ಪೋಲಿಸರಿಗೂ ಸಾಧ್ಯವಾಗಲಿಲ್ಲ. ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಅಹಿತಕರ ಘಟನೆಯನ್ನು ತಡೆಯಲು ಅಂಪೈರ್ ದಿ. ಸುಧಿನ್ ಚಟರ್ಜಿಗೂ ಆಗಲಿಲ್ಲ. ಅಭಿಮಾನಿಗಳ ಹುಚ್ಚಾಟಕ್ಕೆ ಅಮಾಯಕರು ಜೀವ ಕಳೆದುಕೊಳ್ಳಬೇಕಾಯ್ತು.
ಇನ್ನು 2012ರಲ್ಲೂ ಇದೇ ರೀತಿಯ ಘಟನೆ ಕೊಲ್ಕತ್ತಾದಲ್ಲಿ ನಡೆದಿತ್ತು. ಅದು ಕೂಡ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳ ನಡುವಿನ ಪಂದ್ಯದ ವೇಳೆಯಲ್ಲೇ. ಮೋಹನ್ ಬಾಗನ್ ತಂಡದ ರಹೀಮ್ ನಬಿ ಮೇಲೆ ಈಸ್ಟ್ ಬೆಂಗಾಲ್‍ನ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದರು.
ಆಗ ಈಸ್ಟ್ ಬೆಂಗಾಲ್‍ನ ಡಿಫೆಂಡರ್ ಅರ್ನಾಬ್ ಮಂಡಲ್ ಅವರು ಹಣೆ ಪೆಟ್ಟು ಬಿದ್ದಿದ್ದ ರಹೀಮ್ ನಬಿಯವರನ್ನು ಸುರಕ್ಷಿತವಾಗಿ ಮೈದಾನದಿಂದ ಹೊರಗಡೆ ಕರೆ ತಂದು ಮತ್ತೊಂದು ಅವಘಢವನ್ನು ತಪ್ಪಿಸಿದ್ರು. ಈ ಘಟನೆಯಲ್ಲಿ ಪೋಲಿಸರು ಸೇರಿ ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪುಣ್ಯಕ್ಕೆ ಯಾವುದೇ ಜೀವಕ್ಕೆ ಹಾನಿಯಾಗಿಲ್ಲ.
ಇದು ಫುಟ್‍ಬಾಲ್ ಆಟದ ವೇಳೆ ನಡೆದ ಕರಾಳ ದುರ್ಘಟನೆಗಳಾದ್ರೆ, ಕ್ರಿಕೆಟ್ ಆಟದ ವೇಳೆಯಲ್ಲೂ ಇದೇ ರೀತಿಯ ಅವಘಢಗಳು ನಡೆದಿವೆ. 1969ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಬೆಂಕಿ ಅವಘಢ ನಡೆದಿತ್ತು. ಎಸ್. ವೆಂಕಟರಾಘವನ್‍ಗೆ ಅಂಪೈರ್ ನೀಡಿರುವ ವಿವಾದಾತ್ಮಕ ತೀರ್ಪಿನಿಂದ ಕುಪಿತಗೊಂಡಿದ್ದ ಪ್ರೇಕ್ಷಕರು ಗ್ಯಾಲರಿಯಲ್ಲೇ ಬೆಂಕಿ ಹಚ್ಚಿದ್ದರು. ಆದ್ರೆ ಅದೃಷ್ಟವಶಾತ್ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಹೀಗೆ ಭಾರತೀಯ ಕ್ರೀಡಾ ಕ್ಷೇತ್ರಗಳಲ್ಲೂ ಕೆಲವೊಂದು ಅಹಿತಕರ ಘಟನೆಗಳು ನಡೆದಿವೆ.
saakshatv.com
ಆದ್ರೆ ಬೆಂಗಳೂರಿನಲ್ಲಿ ನಡೆದಿದ್ದು ಮಾತ್ರ ಮಹಾ ದುರಂತ. ಸುಮಾರು 2 ಲಕ್ಷಕ್ಕೂ ಅಧಿಕ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಕಣ್ಣಾರೆ ನೋಡಬೇಕು ಎಂಬ ಹಂಬಲದಿಂದ ವಿಜಯೋತ್ಸವಕ್ಕೆ ಬಂದಿದ್ದರು. ಇದು ತಪ್ಪು ಅಂತನೂ ಅಲ್ಲ. ನೆಚ್ಚಿನ ಆಟಗಾರರನ್ನು ನೋಡುವುದು ಅಭಿಮಾನಿಗಳ ಮಿಡಿತವಾಗಿರುತ್ತದೆ. ಆದ್ರೆ ಪರಿಸ್ಥಿತಿಯನ್ನು ಗಮನಿಸಬೇಕು ಅಲ್ವಾ..? ಜನಸಾಗರವನ್ನು ನೋಡಿದಾಗ ಇಲ್ಲಿರುವುದು ಕ್ಷೇಮವಲ್ಲ ಎಂಬ ಅಲೋಚನೆಯಾದ್ರೂ ಬರಬೇಕಲ್ವಾ..?
ಅಷ್ಟಕ್ಕೂ ಘನವೆತ್ತ ಸರ್ಕಾರ ಮತ್ತು ಪೋಲಿಸ್ ಇಲಾಖೆ ಮುನ್ನಚೇರಿಕೆಯ ಕ್ರಮವನ್ನು ತೆಗೆದುಕೊಳ್ಳಬೇಕಿತ್ತು. ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್
ಮಾಡಿದಾಗ ಸಹಜವಾಗಿ ಜನ ದಿಕ್ಕುಪಾಲಾಗಿ ಓಡ್ತಾರೆ. ಆಗ ಈ ರೀತಿಯ ಅವಘಢಗಳು ನಡೆದೇ ನಡೆಯುತ್ತವೆ. ಹಾಗಂತ ಬೆಂಗಳೂರಿನಲ್ಲಿ ಈ ರೀತಿಯ ಜನಸಾಗರ ಸೇರುವುದು ಇದೇನೂ ಮೊದಲಲ್ಲ. ಆಗ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆದ್ರೆ ಈಗಿನ ಮಹಾದುರಂತಕ್ಕೆ ಕಾರಣ ಪ್ರಚಾರದಗೀಳು.. ರೀಲ್ಸ್ ಹುಚ್ಚು, ರಾಜಕಾರಣಿಗಳ ಸ್ವಪ್ರತಿಷ್ಠೆ, ಪೊಲೀಸ್ ಇಲಾಖೆಯ ವೈಫಲ್ಯ.
ಅಂತೂ ಇಂತೂ ಸಂಭ್ರಮಾಚರಣೆಯಲ್ಲಿ 11 ಅಮಾಯಕರ ಬಲಿ ತೆಗೆದುಕೊಂಡ ಕಳಂಕವಂತೂ ಆರ್‍ಸಿಬಿ ತಂಡಕ್ಕೆ ಶಾಶ್ವತವಾಗಿ ಅಂಟಿಕೊಂಡಿದೆ. 18 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಆರ್‍ಸಿಬಿ ತಂಡದ ಖುಷಿ 18 ಗಂಟೆಗಳಲ್ಲೇ ಮಾಯಾವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.
saakshatv.com
ಇನ್ನು ವಿಶ್ವ ಕ್ರೀಡಾಲೋಕದಲ್ಲಿ ಇದಕ್ಕಿಂತಲೂ ದೊಡ್ಡ ಮಹಾದುರಂತಗಳು ಸಂಭವಿಸಿವೆ.
1964 -ಲಿಮಾ ಕ್ರೀಡಾಂಗಣ ಗಲಭೆ. ಇದು ಕ್ರೀಡಾ ಇತಿಹಾಸದಲ್ಲೇ ಅತೀ ದೊಡ್ಡ ದುರಂತ. ಅರ್ಜೆಂಟಿನಾ ಮತ್ತು ಪೆರು ತಂಡಗಳ ನಡುವಿನ ಒಲಿಂಪಿಕ್ಸ್ ಅರ್ಹತಾ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಗಲಭೆ ನಡೆದಿತ್ತು. ಪರಿಣಾಮ 300ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿದ್ದರು. ಸಾವಿರಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದರು.
1989- ಹಿಲ್ಸ್ ಬರೋ ದುರಂತ – ಲಿವರ್‍ಪೂಲ್ ಮತ್ತು ನಾಟಿಂಗ್ ಹ್ಯಾಮ್ ಫಾರೆಸ್ಟ್ ತಂಡಗಳ ನಡುವಿನ ಪಂದ್ಯದ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 97 ಜನ ಸಾವನ್ನಪ್ಪಿದ್ದರು. ನೂರಾರು ಜನ ಗಾಯಗೊಂಡಿದ್ದರು.
1985- ಹೇಸೆಲ್ ಕ್ರೀಡಾಂಗಣ ದುರಂತ – ಲಿವರ್‍ಪೂಲ್ ಮತ್ತು ಜುವೆಂಟಸ್ ತಂಡಗಳ ನಡುವಿನ ಯೂರೋಪಿಯನ್ ಕಪ್ ಫೈನಲ್ ಪಂದ್ಯದ ವೇಳೆ ಕ್ರೀಡಾಂಗಣದ ಗೋಡೆ ಕುಸಿದು 39 ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು.
1982 – ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆದಿದ್ದ ದುರಂತ – ಇದು ರಷ್ಯಾ ಕ್ರೀಡಾ ಇತಿಹಾಸದ ಅತೀ ದೊಡ್ಡ ದುರಂತ. ಸ್ಟಾರ್ಟಕ್ ಮಾಸ್ಕೋ ಮತ್ತು ಜಾರ್ಲೆಮ್ ಎಫ್‍ಸಿ ನಡುವಿನ ಪಂದ್ಯದ ವೇಳೆ ನಡೆದ ದುರಂತದಲ್ಲಿ 66 ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು.
2009 – ಹೂಫೌಟ್ – ಬೋಯಿಗ್ನಿ ಕಾಲ್ತುಳಿತ – ಅಬಿಡ್ಚಾನ್‍ನಲ್ಲಿ ಐವರಿಕೋಸ್ಟಾ ಮತ್ತು ಮಲಾವಿ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 18 ಫುಟ್‍ಬಾಲ್ ಅಭಿಮಾನಿಗಳು ಸಾವನ್ನಪ್ಪಿದ್ದರು. 135ಕ್ಕಿಂತಲೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು.
saakshatv.com
ಒಟ್ಟಾರೆ, ಅಮಾಯಕರ ಪ್ರಾಣದ ಚೆಲ್ಲಾಟವಾಡೋ ಕ್ರೀಡಾಭಿಮಾನಿಗಳ ಅಂಧಾಭಿಮಾನಕ್ಕೆ ಧಿಕ್ಕಾರವಿರಲಿ.. ಅಭಿಮಾನ ಇರಬೇಕು.. ಅದು ಮನಸ್ಸಿನಲ್ಲಿದ್ರೆ ಸಾಕು.. ನೆನಪಿಡಿ..ನಿಮ್ಮ ಅತಿರೇಕದ ಅಭಿಮಾನದಿಂದ ನಿಮ್ಮ ಹೊಟ್ಟೆ ತುಂಬುವುದಿಲ್ಲ. ಪ್ರಾಣ ಕಳೆದುಕೊಂಡ ಮೇಲೆ ನಿಮ್ಮ ಮನೆಯವರನ್ನು ನೋಡಿಕೊಳ್ಳಲು ಯಾರು ಬರಲ್ಲ. ಸೂತಕದ ವೇಳೆ ಸಾಂತ್ವನ ಅಷ್ಟೇ ಸಿಗುತ್ತೆ. ಹಾಗಾಗಿ ಕ್ರೀಡೆಯನ್ನು ಕ್ರೀಡೆಯಾಗಿ ಪರಿಗಣಿಸಿ. ನಿಮ್ಮ ನೆಚ್ಚಿನ ಕ್ರೀಡೆಯ ರೋಚಕ ಕ್ಷಣಗಳನ್ನು ಎಂಜಾಯ್ ಮಾಡಿ.. ಆಟ ನೋಡಿ, ಮುಗಿದ ಮೇಲೆ ನೀವು ನೀವಾಗಿರಿ.
ಕೊನೆಯದಾಗಿ, ಓ ಅಭಿಮಾನಿ..ನಿನಗೆ ಯಾರೂ ಹೀರೋ ಅಲ್ಲ.. ನಿನಗೆ ನೀನೇ ಹೀರೋ.. ಅಷ್ಟೇ ಕಣೋ ಬದುಕು..!
ಸನತ್ ರೈ