ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಅರೆಸ್ಟ್
ನವದೆಹಲಿ : ರೆಸ್ಲರ್ ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಬಾರಿ ಪದಕ ಗೆದ್ದಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 04 ರಂದು ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು.
ಅಂದಿನಿಂದ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. ನಂತರ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು.
ಇದಾದ ಬಳಿಕ ಮೇ 18ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು.
ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.










