ಒಂದು ಗೆಲುವು.. ದಾಖಲೆಗಳು ಹಲವು : ಕಪಿಲ್ ದಾಖಲೆ ಸರಿಗಟ್ಟಿದ ವಿರಾಟ್..!
ಲಂಡನ್ : ನಾಯಕತ್ವ ವಿಚಾರದಲ್ಲಿ ಪದೇ ಪದೇ ಟೀಕೆಗೆ ಒಳಗಾಗುವ ವಿರಾಟ್ ತಮ್ಮನ್ನು ಟೀಕಿಸುವವರಿಗೆ ಕೇವಲ ಆಟದಿಂದಲೇ ಉತ್ತರ ನೀಡುತ್ತಿದ್ದಾರೆ.
ವಿರಾಟ್ ಗೆ ನಾಯಕತ್ವ ಬರಲ್ಲ ಎಂದವರ ಮುಂದೆಯೇ ಸಾಧನೆ ಶಿಖರವೇರಿ ಬಹುಪರಾಕ್ ಎನಿಸಿಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ವಿರಾಟ್ ನಾಯಕತ್ವವೇ ಟೀಂ ಇಂಡಿಯಾದ ಅಮೋಘ ಗೆಲುವಿಗೆ ಕಾರಣ ಅನ್ನೋದನ್ನ ಯಾರು ಅಲ್ಲಗೆಳೆಯೋಕೆ ಸಾಧ್ಯವಿಲ್ಲ.
ಯಾಕೆಂದರೇ ವಿರಾಟ್ ರ ಆಕ್ರಮಣಕಾರಿ ನಾಯಕತ್ವ, ಗೆದ್ದೇ ಗೆಲ್ಲಬೇಕು ಅನ್ನೋ ಮನಸ್ಥಿತಿ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕುವಂತೆ ಮಾಡುತ್ತಿದೆ. ಇದಕ್ಕೆ ಸ್ಪಷ್ಟ ನಿರ್ದಶನ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯ..!
ಹೌದು..! ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದ ಅಂತಿಮ ದಿನ ಉತ್ತಮ ಆರಂಭ ಪಡೆದಿದ್ದ ಇಂಗ್ಲೆಂಡ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು.
ಆದರೆ ನಂತರ ಟೀಮ್ ಇಂಡಿಯಾದ ಬೌಲರ್‍ಗಳ ಪ್ರದರ್ಶನದ ಮುಂದೆ ಇಂಗ್ಲೆಂಡ್ ದಾಂಡಿಗರು ಮಂಕಾದರು. ಅದರಲ್ಲೂ ವಿರಾಟ್ ಕೊಹ್ಲಿಯ ಆಟ್ಯಾಕಿಂಗ್ ಫೀಲ್ಡಿಂಗ್ ಸೆಟ್ಟಿಂಗ್ ಗೆ ಇಂಗ್ಲೀಷರು ಗಾಬರಿಗೊಂಡು ವಿಕೆಟ್ ಒಪ್ಪಿಸುತ್ತಾ ಸಾಗಿ ಪಂದ್ಯವನ್ನು ಕೈಚೆಲ್ಲಿದರು.
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಎರಡು ಜಯ ದಾಖಲಿಸಿದ ಎರಡನೇ ನಾಯಕ ಸಾಧನೆ ಮಾಡಿದ್ದಾರೆ ಕೊಹ್ಲಿ. ಇದಕ್ಕೂ ಮುನ್ನ ಕಪಿಲ್‍ದೇವ್ ಮಾತ್ರವೇ ಈ ಸಾಧನೆಯನ್ನು ಮಾಡಿದ್ದರು.
ಇನ್ನು ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಂಡನ್‍ನಲ್ಲಿರುವ ಓವಲ್ ಹಾಗೂ ಲಾಡ್ರ್ಸ್ ಮೈದಾನದಲ್ಲಿ ಒಂದೇ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದ ಸಾಧನೆ ಮಾಡಿದೆ. ಇದಲ್ಲದೆ ಓವಲ್ ನಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ.