ಮೈಸೂರು : ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮೈಸೂರಿನಲ್ಲಿ ವಿಮಾನ ಹಾರಾಟ ಶುರುವಾಗಿದೆ. ಸದ್ಯ ಮೈಸೂರಿನಿಂದ ಬೆಂಗಳೂರು ಹಾಗೂ ಬೆಳಗಾವಿಗೆ ವಿಮಾನ ಹಾರಾಟ ಆರಂಭವಾಗಿದೆ. ಇಂದು ಬೆಂಗಳೂರಿನಿಂದ ಮಧ್ಯಾಹ್ನ 4:30ಕ್ಕೆ ವಿಮಾನ ಹೊರಟು 5:30ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿದೆ. ಅದೇ ವಿಮಾನ ಮೈಸೂರಿನಿಂದ ಸಂಜೆ 6:15ಕ್ಕೆ ಹೊರಟು 7:15ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣ ತಲುಪಲಿದೆ.
ಮೇ 26 ಅಂದರೇ ನಾಳೆ ಮಧ್ಯಾಹ್ನ 3:30 ಕ್ಕೆ ಬೆಂಗಳೂರಿನಿಂದ ಹೊರಡೋ ವಿಮಾನ 4 ಗಂಟೆಗೆ ಮೈಸೂರು ತಲುಪಲಿದೆ. ಮತ್ತೆ ಮೈಸೂರಿನಿಂದ ರಾತ್ರಿ 9:45ಕ್ಕೆ ಹೊರಟು ರಾತ್ರಿ 10:45ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿಗೆ ಮಂಗಳವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಬೆಳಗಾವಿಯಿಂದ ಮಧ್ಯಾಹ್ನ 3 ಕ್ಕೆ ಹೊರಡೋ ವಿಮಾನ ಸಂಜೆ 4:20ಕ್ಕೆ ಮೈಸೂರು ತಲುಪಲಿದೆ. ಅದೇ ವಿಮಾನ ಸಂಜೆ 4:55ಕ್ಕೆ ಮೈಸೂರಿನಿಂದ ಹೊರಟು ಸಂಜೆ 6:15ಕ್ಕೆ ಬೆಳಗಾವಿ ತಲುಪಲಿದೆ. ವಾರದ ಎಲ್ಲಾ ದಿನ ಮೈಸೂರು-ಬೆಳಗಾವಿಗೆ ವಿಮಾನ ಹಾರಾಟ ನಡೆಸಲಿದೆ.
ಸದ್ಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಮಾನದಲ್ಲಿ ಪ್ರಯಾಣ ಬೆಳೆಸುವವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.








