ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದ ಬೆನ್ನಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಬೇಗ ಆರಂಭಿಸಿ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷ ಅಂಥೋನಿ ಸೆಬಾಷ್ಟಿಯನ್, ಹಿರಿಯ-ಕಿರಿಯ ಶಾಲೆಗಳನ್ನು ಆರಂಭಿಸಬಹುದು ಎಂದು ಶಿಫಾರಸು ಮಾಡಿದ್ದಾರೆ.
ರಾಜ್ಯದಲ್ಲಿ ಹೆಮ್ಮಾರಿ ಕೊರೊನಾಗೆ 100ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕಿಯರು ಮೃತಪಟ್ಟಿದ್ದಾರೆ. ಒಂದೇ ಒಂದು ಊರಲ್ಲಿ 7 ಮಂದಿ ಶಿಕ್ಷಕರು ಸಾವನ್ನಪ್ಪಿರುವ ವರದಿ ಸರ್ಕಾರದ ಮುಂದೆಯೇ ಇದ್ದರೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು ಪೋಷಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ರಾಜ್ಯದಲ್ಲಿ ಪ್ರತಿ ದಿನ 10 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸುಗಳು..
1. ಆದಷ್ಟು ಬೇಗ ಶಾಲೆಗಳನ್ನು ಆರಂಭಿಸಬೇಕು
2. ಆದರೆ ಪರೀಕ್ಷೆ ಬೇಡ ಎಂದು ಶಿಫಾರಸು
3. ಈ ವರ್ಷ ಪರೀಕ್ಷಾ ರಹಿತ ವರ್ಷ ಎಂದು ಘೋಷಿಸಿ
4. ಹೆಚ್ಚಿನ ಮಕ್ಕಳಿರುವ ಶಾಲೆಯಲ್ಲಿ ಪಾಳಿಯ ಆಧಾರದಲ್ಲಿ ಶಾಲೆ ನಡೆಸಬಹುದು
5. ಹಿರಿಯ-ಕಿರಿಯ ಶಾಲೆಗಳನ್ನು ಆರಂಭಿಸಬಹುದು
6. 30ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇರುವ ಶಾಲೆಗಳನ್ನು ಆರಂಭಿಸಬಹುದು
7. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ
8. ಶಾಲೆ ತೆರೆಯುವುದು ಸಮಸ್ಯೆಯೇ ಅಲ್ಲ
9. ಶಾಲೆ ಇಲ್ಲದ ಕಾರಣ ಬಾಲ್ಯವಿವಾಹ
10. ಬಾಲ ಕಾರ್ಮಿಕ ಸಮಸ್ಯೆ ಹೆಚ್ಚಾಗುತ್ತಿದೆ
11. ಮುನ್ನೆಚ್ಚರಿಕೆಯೊಂದಿಗೆ ಶಾಲೆಗಳನ್ನು ಆರಂಭಿಸಬಹುದು
ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ 10 ವರ್ಷದೊಳಗಿನ ಮಕ್ಕಳು ಮನೆಯಿಂದ ಹೊರ ಬರಬಾರದು ಎಂದು ರಾಜ್ಯ ಸರ್ಕಾರ ಹಾಗೂ ಅರೋಗ್ಯ ಇಲಾಖೆ ಹೇಳುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ, ಹೀಗಾಗಿ ಶಾಲೆಗಳನ್ನು ತೆರೆಯುವುದು ಸಮಸ್ಯೆಯೇ ಅಲ್ಲ ಎಂದು ಮಕ್ಕಳ ಆಯೋಗ ಶಿಫಾರಸು ಮಾಡಿದೆ.
ಒಂದು ವೇಳೆ ಶಾಲೆಗಳನ್ನು ಆರಂಭಿಸಿದರೆ ಮಕ್ಕಳೇ ಹೊರೊನಾ ಸೋಂಕು ಹರಡುವ ರಾಯಭಾರಿಗಳು ಆಗುತ್ತಾರೆ ಎಂದು ಶಿಕ್ಷಣ ತಜ್ಞರು ಹಾಗೂ ವೈದ್ಯರು ಹೇಳುತ್ತಿದ್ದಾರೆ. ತಜ್ಞರು, ಶಿಕ್ಷಕರು ಹಾಗೂ ಪೋಷಕರ ಅಭಿಪ್ರಾಯ ಸಂಗ್ರಹಿಸದೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆಗಳನ್ನು ಆರಂಭಿಸಲು ಶಿಫಾರಸು ಮಾಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ.