ಸರ್ವಪಕ್ಷ ಸಭೆಯಲ್ಲಿ ನಾಯಕರು ಮಂಡಿಸಿದ ಅಭಿಪ್ರಾಯಗಳು
ಹೊಸದಿಲ್ಲಿ, ಜೂನ್ 20: ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ನಡೆದಿದ್ದು, ದೇಶದ ಪ್ರಮುಖ 20 ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು . ಸರ್ವಪಕ್ಷ ಸಭೆ ಆರಂಭಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಎದ್ದುನಿಲ್ಲುವ ಮೂಲಕ ಗಾಲ್ವಾನ್ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಿದರು.
ಗಾಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ತಮ್ಮ ಬೆಂಬಲವಿರುವುದಾಗಿ ಎಲ್ಲ ಪ್ರತಿಪಕ್ಷಗಳು ಮತ್ತು ಎನ್ ಡಿಎನ ಮಿತ್ರಪಕ್ಷಗಳು ಈ ಸಂದರ್ಭದಲ್ಲಿ ಘೋಷಿಸಿದವು. ವಿವಿಧ ಪಕ್ಷದ ನಾಯಕರು ಮಂಡಿಸಿದ ಅಭಿಪ್ರಾಯಗಳ ಬಗ್ಗೆ ಇಲ್ಲಿದೆ ಒಂದು ವರದಿ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ
ಭಾರತ-ಚೀನಾ ನಡುವಿನ ಸಂಘರ್ಷಕ್ಕೆ ಮೂಲ ಕಾರಣ ಭಾರತೀಯ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಆರೋಪಿಸಿದರು. ಗಡಿ ನಿಯಂತ್ರಣ ರೇಖೆಯ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಎಲ್ಲಾ ಮಾರ್ಗಗಳನ್ನು ಕಳೆದುಕೊಂಡಿರುವ ಪರಿಣಾಮದಿಂದಾಗಿ ನಾವು 20 ಭಾರತೀಯ ಯೋಧರನ್ನು ಕಳೆದುಕೊಳ್ಳಬೇಕಾಯಿತು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ನಮ್ಮೆಲ್ಲರ ಮನದಲ್ಲೂ ನಾವೆಲ್ಲರೂ ಒಂದೇ ಎಂಬ ಭಾವನೆಯಿದೆ. ಪ್ರಧಾನ ಮಂತ್ರಿಗಳೇ ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ಭಾರತೀಯ ಯೋಧರ ಜೊತೆ ಮತ್ತು ಕುಟುಂಬದವರ ಜೊತೆಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ನಮ್ಮದು ಶಾಂತಿ ಪ್ರಿಯ ರಾಷ್ಟ್ರ ಆದರೆ ಇದು ನಮ್ಮ ದೌರ್ಬಲ್ಯವಲ್ಲ.ಭಾರತ ಬಲಶಾಲಿ ರಾಷ್ಟ್ರವೇ ಹೊರತು ಅಸಹಾಯಕವಾಗಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಚೀನಾದ ಎದುರು ಭಾರತವು ಎಂದಿಗೂ ತಲೆ ಬಾಗುವುದಿಲ್ಲ. ಚೀನಾದಲ್ಲಿರುವುದು ಸರ್ವಾಧಿಕಾರಿ ಪ್ರಭುತ್ವವೇ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ . ಅವರು ತಮಗೆ ಬೇಕಾದ ವ್ಯವಸ್ಥೆಗಳನ್ನು ಬೇಕೆನಿಸಿದಾಗ ಮಾಡುತ್ತಾರೆ. ಅವರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತವು ಬದ್ಧವಾಗಿರಬೇಕು. ಗಡಿಯಲ್ಲಿ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಬಳಸಲು ಅವಕಾಶ ನೀಡಬಾರದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು. 1996ರ ಭಾರತ-ಚೀನಾ ಪಂಚಶೀಲಾ ಒಪ್ಪಂದದ ಪ್ರಕಾರ ಗಡಿಯಲ್ಲಿ ಎರಡೂ ದೇಶಗಳ ಸೇನಾಪಡೆಯ ಸೈನಿಕರು ಯಾವುದೇ ರೀತಿಯ ಮದ್ದು-ಗುಂಡುಗಳನ್ನು ಮತ್ತು ಸ್ಪೋಟಕಗಳನ್ನು ಇಟ್ಟುಕೊಳ್ಳುವಂತಿಲ್ಲ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನವಿರದಿದ್ದರೂ, ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದೂ ಚೀನಾಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು