ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕೊನೆಗೂ ನಿದ್ದೆಯಿಂದ ಎಳುವ ಸೂಚನೆ ಕೊಡುತ್ತಿದೆ ವಿರೋಧ ಪಕ್ಷ ಕಾಂಗ್ರೆಸ್‌

1 min read
Siddaramaiah saaksha tv

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕೊನೆಗೂ ನಿದ್ದೆಯಿಂದ ಎಳುವ ಸೂಚನೆ ಕೊಡುತ್ತಿದೆ ವಿರೋಧ ಪಕ್ಷ ಕಾಂಗ್ರೆಸ್‌

ranadeep singh surjiwala kpcc saakshatvಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ  ಜಯಭೇರಿ ಬಾರಿಸಿದ ನಂತರ ರಾಜ್ಯ ಕಾಂಗ್ರೆಸ್‌ಗೆ ಒಂಚೂರು ಆತ್ಮವಿಶ್ವಾಸ ಬಂದ ಹಾಗಿದೆ. ಇನ್ನೇನು ಸಾಲು ಸಾಲು ಚುನಾವಣೆಗಳು ಮುಂದಿವೆಯಲ್ಲ. ಕಾಂಗ್ರೆಸ್‌ ನಿದ್ದೆಯಿಂದ ಮೇಲೆದ್ದು ಕುಳಿತಿದೆ.
ತಾನಿನ್ನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು ಆಗೊಂದು ಈಗೊಂದು ಛಲಕ್‌ ಕೊಡುವ
ಕಾಂಗ್ರೆಸ್‌, ಈಗ ಮೇಕೆದಾಟು ಆಣೆಕಟ್ಟಿನ ವಿಚಾರ ಇಟ್ಟುಕೊಂಡು ಪಾದಯಾತ್ರೆ ನಡೆಸುವ ಘೋಷಣೆ ಮಾಡಿಕೊಂಡಿದೆ. ಕರ್ನಾಟಕ-ತಮಿಳುನಾಡು ಗಡಿಯಲ್ಲಿನ ಬಹುಪಯೋಗಿ ಜಲಾಶಯ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಲು ಮುಂದಿನ ತಿಂಗಳು ಮೇಕೆದಾಟುದಿಂದ ಬೆಂಗಳೂರಿನವರೆಗೆ 100 ಕಿ.ಮೀ ಪಾದಯಾತ್ರೆಯನ್ನು ಕಾಂಗ್ರೆಸ್‌ ಘೋಷಿಸಿದೆ.

ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಯೋಜನಾ ಸ್ಥಳವನ್ನು
ಗುರುತಿಸಿದ್ದು, ಅಲ್ಲಿ ನೀರನ್ನು ಸಂಗ್ರಹಿಸಲು ಮತ್ತು ಮಳೆಗಾಲದಲ್ಲಿ ಹೆಚ್ಚಿನ ನೀರು ಬಳಸಿ ವಿದ್ಯುತ್ ಉತ್ಪಾದಿಸಲು ಅಣೆಕಟ್ಟು ನಿರ್ಮಿಸಲು ಪ್ರಸ್ತಾಪಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಈ ಸಂಗತಿಯನ್ನು ತನ್ನ ಅಜೆಂಡಾದಲ್ಲಿ ಸೇರಿಸಿಕೊಂಡು ಶತಾಯಗತಾಯ ಮೇಕೆದಾಟು ಯೋಜನೆ ಅನುಷ್ಠಾನವಾಗಲೇಬೇಕು ಎಂದು ಆಗ್ರಹಿಸತೊಡಗಿದೆ. ಇಲ್ಲಿ ವಿಚಿತ್ರವೆಂದರೆ ರಾಜ್ಯದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದರೇ ಅತ್ತ ತಮಿಳುನಾಡಿ ಬಿಜೆಪಿ ಘಟಕ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಇಲ್ಲಿ ಕಾಂಗ್ರೆಸ್‌ ಮೇಕೆದಾಟು ಅನುಷ್ಠಾನಕ್ಕಾಗಿ ಪಾದಯಾತ್ರೆ ಮಾಡುತ್ತೇನೆ ಅನ್ನುತ್ತಿದ್ದರೆ, ಅಲ್ಲಿ ತಮಿಳುನಾಡಿನ ಕಾಂಗ್ರೆಸ್‌ ಕೂಡಾ ಈ ಯೋಜನೆಗೆ ಅಪಸ್ವರ ತೆಗೆಯುತ್ತಿದೆ.

meekedaatu kpcc saakshatv karnatakaಕೆಪಿಸಿಸಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಾದಯಾತ್ರೆಯ
ಯೋಜನೆಗಳ ಕುರಿತು ಈಗಾಗಲೇ ಮಾತಾಡಿದ್ದು, ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಸರ್ಕಾರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಹಿಂದೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಪತ್ರ ಬರೆದು ಯೋಜನೆ ಕೈಬಿಡುವಂತೆ ಮನವಿ ಮಾಡಿದ್ದರು. ಬೆಂಗಳೂರು ಮಹಾನಗರದ ಬೇಡಿಕೆಯನ್ನು ಪೂರೈಸಲು ಕರ್ನಾಟಕವು ಈಗಾಗಲೇ ಕುಡಿಯುವ ನೀರನ್ನು ಸೆಳೆಯಲು ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಿರುವಾಗ, ಕುಡಿಯುವ ನೀರಿಗೆ 4.75 ಟಿಎಂಸಿಯನ್ನು ಬಳಸಿಕೊಳ್ಳಲು 67.16 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದ ಅಗತ್ಯವನ್ನು ಸಮರ್ಥಿಸಲಾಗುವುದಿಲ್ಲ ಎಂದು ಸ್ಟಾಲಿನ್‌ ಪತ್ರದಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಸದ್ಯಕ್ಕಂತೂ ಬಸವರಾಜ್‌ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಉಂದಿನ ಚುನಾವಣೆವರೆಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗುವ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ ಅನ್ನುವುದು ಸಿದ್ದರಾಮಯ್ಯನವರ ಅಂದಾಜು. ಹೀಗಾಗಿಯೇ ಈಗ ಮತ್ತೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದರೆ ರಾಜಕೀಯ ಲಾಭ ಪಡೆದುಕೊಳ್ಳಬಹುದು
ಎನ್ನುವ ಲೆಕ್ಕಾಚಾರ ಹಾಕಿ ಕುಳಿತಿದೆ ಕಾಂಗ್ರೆಸ್‌.

ಇಷ್ಟಾಯಿತಲ್ಲ ಕೇಂದ್ರದಲ್ಲಿಯೂ ಕಾಂಗ್ರೆಸ್‌ ನಿದ್ರೆ ಮುಗಿದಿದೆ ಅನ್ನಿಸುತ್ತಿದೆ. ಜನರು ಮತ್ತು ರೈತರ ಸಾವಿನ ಮಾಹಿತಿ ಮುಂದಿಟ್ಟು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಕ್ಸಮರ ಶುರುಮಾಡಿದೆ. ಕಳೆದ 7 ವರ್ಷಗಳಲ್ಲಿ 9.5 ಲಕ್ಷ ಜನರ ಸಾವಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್, ‘ಅಚ್ಛೇ ದಿನ್’ ಭರವಸೆ ನೀಡಿ ಅಧಿಕಾರಕ್ಕೆ ಬಂದರೂ ಅದನ್ನು ಸಾಧಿಸಲು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದೆ. 2014-2020ರ ನಡುವೆ 9,58,275 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ಭಾರತದಲ್ಲಿ ಆತ್ಮಹತ್ಯೆಗಳು ಮತ್ತು ಅಪಘಾತದ ಸಾವುಗಳು ಕುರಿತ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಟೀಕಾಸ್ತ್ರ ಪ್ರಯೋಗಿಸುತ್ತಿದೆ.

siddaramaiah kpcc saakshatvಈ ಕುರಿತು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಸರ್ಕಾರದ ತೀವ್ರ ನಿರಾಸಕ್ತಿ ಮತ್ತು ಸಂವೇದನಾಶೀಲತೆ ಕೊರತೆಯಿಂದ ಹತಾಶ ನಾಗರಿಕರು ಬದುಕಿನ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಅನ್ನದಾತ ರೈತರು, ದುಡಿಯುವ ಕೂಲಿಗಳು, ದಿನಗೂಲಿಗಳು, ಗೃಹಿಣಿಯರು, ನಿರುದ್ಯೋಗಿ ವಿದ್ಯಾವಂತ ಯುವಕರು ಆತ್ಮಹತ್ಯೆಯ ದಾರಿ ತುಳಿಯುತ್ತಿರುವುದಕ್ಕೆ ಕೇಂದ್ರವೇ ನೇರ ಕಾರಣ ಎಂದು ಗುರುಗುಟ್ಟಿದ್ದಾರೆ. ತನ್ನ ಜನವಿರೋಧಿ ನೀತಿಗಳನ್ನು ಮರೆಮಾಚುವ ಪ್ರಯತ್ನದಲ್ಲಿ, ಸರ್ಕಾರ ಜನರಲ್ಲಿ ಒಡಕು, ನಕಾರಾತ್ಮಕತೆ, ಹತಾಶೆಯನ್ನು ಶಾಶ್ವತವಾಗಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ
ಶೇಕಡಾ 55 ರಷ್ಟು ನಿರುದ್ಯೋಗಿಗಳು, ಶೇಕಡಾ 58ರಷ್ಟು ರೈತರು, ಕಾರ್ಮಿಕರು ಮತ್ತು
ದಿನಗೂಲಿಗಳಿದ್ದಾರೆ. ಆತ್ಮಹತ್ಯೆಯ ಪ್ರಮಾಣ ಶೇಕಡಾ 139.37ರಷ್ಟು ಏರಿಕೆಯಾಗಿದೆ. ರೈತರು ಬಲವಂತವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರದ "ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿ ಮತ್ತು ರೈತ ವಿರೋಧಿ" ನೀತಿಗಳಿಂದಾಗಿ 78,303 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದರಲ್ಲಿ 35,122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಕೇಂದ್ರ ಸರ್ಕಾರವನ್ನು ಅಂಕಿ ಅಂಶ ಸಹಿತ ಪ್ರಶ್ನಿಸುತ್ತಿದೆ.

ಹೆಚ್ಚುತ್ತಿರುವ ದಿನಬಳಕೆಯ ವೆಚ್ಚಗಳು, ಎಂಎಸ್‌ಪಿ ಕೊರತೆ ಮತ್ತು ಬೆಳೆ ವಿಮಾ ಯೋಜನೆಗಳು ವಿಮಾ ಕಂಪೆನಿಗಳು ಹೆಚ್ಚು ಪ್ರಯೋಜನ ನೀಡುತ್ತಿವೆಯೇ ಹೊರತು ರೈತರಿಗಲ್ಲ. ಇದರ ಜೊತೆ ಮೂರು ಕುಖ್ಯಾತ ಕೃಷಿಕರನ್ನು ಮರಣಶಿಲೆಗೆ ಏರಿಸುವ ಕೃಷಿ ವಿರೋಧಿ ಬಿಲ್‌ಗಳು ಅನ್ನದಾತರ ಬದುಕನ್ನು ಮತ್ತಷ್ಟು ಹದಗೆಡಿಸುತ್ತವೆ. 2019ರಿಂದ 2020ರವರೆಗೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಶೇಕಡಾ 19ರಷ್ಟು ಹೆಚ್ಚಳವಾಗಿದೆ. ಸರ್ಕಾರವು ಅಕ್ಷರಶಃ ರೈತರನ್ನು ಆತ್ಮಹತ್ಯೆಗೆ ಪ್ರಚೋದಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇದೇ ಸತ್ಯವನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದರೆ ಕಾಂಗ್ರೆಸ್‌ ರಾಷ್ಟ್ರದಲ್ಲಾಗಲೀ ರಾಜ್ಯದಲ್ಲಾಗಲೀ ಹೀಗೆ ದಯನೀಯ ಸ್ಥಿತಿಯಲ್ಲಿರಬೇಕಾದ ಪರಿಸ್ಥಿತಿ ಇರುತ್ತಿರಲಿಲ್ಲ. ಕಾಂಗ್ರೆಸ್‌ನ ಪ್ರಮುಖ ಪ್ರಭಾವಿ ನಾಯಕರ ಸೆಟಲ್‌ಮೆಂಟ್‌ ರಾಜಕೀಯ ಮತ್ತು
ಕೇಂದ್ರದ ಐಟಿ – ಇಡಿ ಬ್ರಹ್ಮಾಸ್ತ್ರದ ಕುರಿತಾದ ಭಯದಿಂದ ಅಂಡು ಒದ್ದೆ ಮಾಡಿ ಕುಳಿತ ಪರಿಣಾಮವೇ ಇಂದು ಕಾಂಗ್ರೆಸ್‌ ತಲುಪಿರುವ ದುಃಸ್ಥಿತಿಗೆ ಕಾರಣ. ಈಗಲಾದರೂ ಎಚ್ಚೆತ್ತುಕೊಂಡು ನಾಯಕರು ತಮ್ಮ ತಮ್ಮ ಕ್ಷೇತ್ರಗಳ ಆಡಳಿತ ಲೋಪವನ್ನು ಜನರ ಮುಂದೆ ತೆರೆದಿಟ್ಟರೇ ಮಾತ್ರ ಕಾಂಗ್ರೆಸ್‌ ಉಳಿಯುತ್ತದೆ ಇಲ್ಲವಾದರೆ ಶವಪೆಟ್ಟಿಗೆ ಸಿದ್ಧವಾಗಿದೆ ಮೊಳೆ ಹೊಡೆಯುವುದಷ್ಟೇ ಬಾಕಿ.

ಕೃಪೆ – ಹಿಂದವೀ ಸ್ವರಾಜ್ಯ

-ಮುಕ್ತಾರ್‌ ಅಲಿ,

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd