‘ಒಪ್ಪೋಸ್ಸಮ್ ಎನ್ನುವ ಜೀವಂತ ಪಳೆಯುಳಿಕೆಯ ಜೀವಿಗಳ ಕೌತುಕದ ಕಥಾನಕ: Saakshatv vishwa vismaya episode1
ದಕ್ಷಿಣ ಅಮೇರಿಕಾ ಖಂಡವು ಹಲವು ನೈಸರ್ಗಿಕ ಅಚ್ಚರಿಗಳ ತವರೂರು. ಅದರ ಪ್ರಾಣಿ ಲೋಕದ ವಿಸ್ಮಯಗಳಲ್ಲಿ ಅಲ್ಲಿನ ಸ್ಥಳೀಯ ಸಸ್ತನಿಯಾದ ಒಪೋಸ್ಸಮ್ ಎಂಬ ಸಣ್ಣ ಜೀವಿಯೂ ಒಂದು. Saakshatv vishwa vismaya episode1
ಒಪ್ಪೋಸಮ್ ಎಂದು ಕರೆಯಲ್ಪಡುವ ಈ ಜೀವಿಯು ಗರ್ಭಚೀಲವುಳ್ಳ ಮರ್ಸುಪಿಯಲ್ ಜಾತಿಗೆ ಸೇರಿದ ಸಸ್ತನಿ. ಮರ್ಸುಪಿಯಲ್ ಎಂದರೆ ಮರಿ ಹಾಕಿ ಅವುಗಳನ್ನ ತನ್ನ ಹೊಟ್ಟೆಯ ಚೀಲದೊಳಗೆ ಇಟ್ಟು ಹಾಲುಣಿಸಿ ಬೆಳೆಸುವ ಸಸ್ತನಿ ಎಂದರ್ಥ. ಈ ವಿಶಿಷ್ಟ ಸಸ್ತನಿಯ ಕುರಿತಾದ ಒಂದಷ್ಟು ಸ್ವಾರಸ್ಯಕರ ಮಾಹಿತಿಗಳನ್ನ ತಿಳಿಯೋಣ ಬನ್ನಿ
ಇದರ ಆವಾಸಸ್ಥಾನ ದ ಅಮೇರಿಕಾ ಖಂಡ. ಇದು ಅತ್ಯಂತ ಪ್ರಾಚೀನವಾದ ಸಸ್ತನಿ ಎಂದು ಕರೆಸಿಕೊಂಡಿದೆ. ಇದು ದ ಅಮೇರಿಕಾದಲ್ಲಿ ಮೊದಲು ವಿಕಾಸವಾಗಿ ನಂತರ ದ ಅಮೇರಿಕಾ ಭೂ ಪಲ್ಲಟಗಳಿಂದ ಉತ್ತರ ಅಮೇರಿಕಾ ಖಂಡಕ್ಕೆ ಹತ್ತಿರವಾದಾಗ ಆಗ ಬೆಸೆದ ಹಾದಿಯ ಮೂಲಕ ಇವು ದ ಅಮೇರಿಕಾದಿಂದ ಉತ್ತರ ಅಮೇರಿಕಕ್ಕು ಸಹ ವಲಸೆ ಬಂದವು ಎನ್ನುತ್ತಾರೆ. ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದಿನ ಮಯೋಸಿನ್ ಹಾಗೂ ಒಗ್ಲಿಯೊಸೀನ್ ಯುಗದ ಮಧ್ಯಂತರದಲ್ಲಿ ಈ ಜೀವಿ ವಿಕಾಸ ಹೊಂದಿದೆ ಎಂದು ಸಂಶೋಧಿಸಲಾಗಿದೆ.
ಅಂದರೆ ಎರಡು ಕೋಟಿ ವರ್ಷಗಳಿಂದಲು ಸಹ ಗುಣ ಸ್ವಭಾವದಲ್ಲಿ, ಆಹಾರ ಕ್ರಮದಲ್ಲಿ ಹಾಗೂ ದೈಹಿಕ ರೂಪು ರಚನೆಯಲ್ಲಿ ಯಾವ ಮಹತ್ತರ ಬದಲಾವಣೆ ಕಾಣದೆ ನಶಿಸಿಯೂ ಹೋಗದೆ ನಿಸರ್ಗದ ಈ ಎಲ್ಲಾ ಒತ್ತಡಗಳನ್ನು ಗೆದ್ದು ಬದುಕಿ ಬಂದ ಜಗತ್ತಿನ ಕೆಲವೆ ಕೆಲ ಅಪರೂಪದ ಜೀವಿಗಳಲ್ಲಿ ಈ ಒಪ್ಪೋಸ್ಸಮ್ ಸಹ ಒಂದು. ಆದ್ದರಿಂದಲೆ ಇದನ್ನು ‘ಲಿವಿಂಗ್ ಫಾಸಿಲ್’ ಅಂದರೆ ‘ಜೀವಂತ ಪಳೆಯುಳಿಕೆ’ ಎಂದೂ ಸಹ ಕರೆಯಲಾಗುತ್ತದೆ. ಮಧ್ಯಮ ಗಾತ್ರದ ಈ ಒಪ್ಪೋಸಮ್ ಸಾಧಾರಣವಾಗಿ ಗಾತ್ರದಲ್ಲಿ ನಮ್ಮ ಮನೆಯ ಬೆಕ್ಕನ್ನೆ ಹೋಲುತ್ತದೆ.
ಮೂಗಿಲಿಯಂಥ ಮೂಗು, ಸುಮಾರು ಐವತ್ತು ಚೂಪು ಹಲ್ಲುಗಳ ಬಲಿಷ್ಠ ದವಡೆಗಳು, ಉಗುರಿಲ್ಲದ ಮುಂಗಾಲು, ಉಗುರುಳ್ಳ ಹಿಂಗಾಲು ಹಾಗೂ ತನ್ನ ದೇಹಗಾತ್ರಕ್ಕಿಂತ ಉದ್ದವಾದ ಹಾಗೂ ಬಲವಾದ ಬಾಲ ಇದಿಷ್ಟು ಈ ಜೀವಿಯ ದೈಹಿಕ ರಚನೆಯ ಸಂಕ್ಷಿಪ್ತ ವಿವರಣೆ ಎನ್ನಬಹುದು. ಇವು ಉತ್ತರ ಅಮೇರಿಕಾ ಖಂಡದ ಏಕೈಕ ಮರ್ಸುಪಿಯಲ್ ಸಸ್ತನಿಗಳು. ಅಲ್ಲಿನ ಕಾಡು ಜನ ಅವರ ಭಾಷೆಯಲ್ಲಿ ಈ ಜೀವಿಯನ್ನ ‘ಒಪೌಸಮ್’ ಎಂದು ಕರೆದರು. ಅದರರ್ಥ ‘ವೈಟ್ ಬೀಸ್ಟ್’ ಎಂದು. ಸಾಮಾನ್ಯವಾಗಿ ಇವು ಬಿಳಿ ಹಾಗೂ ಕಂದು ಬಣ್ಣದಲ್ಲಿರುತ್ತವೆ. ಜನರಿಗೆ ಎದುರಾದ ಕೂಡಲೆ ಹೆದರಿ ಓಡಿಹೋಗುತ್ತಿದ್ದ ಈ ಬಿಳಿ ಜೀವಿಗಳನ್ನ ಅವರು ಹಾಗೆ ಕರೆದಿರಬಹುದು.
ಇದೇ ಮಾದರಿಯ ‘ಪಾಸ್ಸಮ್’ (Possum) ಎಂದು ಕರೆಯಲ್ಪಡುವ ಇನ್ನೊಂದು ಮರ್ಸುಪಿಯಲ್ ಸಸ್ತನಿಯನ್ನ ‘ಒಪ್ಪೋಸಮ್’ ಗಳೆಂದು ಅಪಾರ್ಥ ಮಾಡಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಪಾಸ್ಸಂ ಗಳೇ ಬೇರೆ. ಹಾಗೂ ಒಪ್ಪೋಸಮ್ ಗಳೇ ಬೇರೆ. ಪೋಸ್ಸಮ್ ಗಳೂ ಸಹ ಮರ್ಸುಪಿಯಲ್ ವರ್ಗಕ್ಕೆ ಸೇರಿದ ಸಸ್ತನಿಗಳೆ ಆದರೂ ಅವು ಆಸ್ಟ್ರೇಲಿಯಾದ ನ್ಯೂ ಗಿನಿಯಾದ ಸ್ಥಳೀಯ ಜೀವಿಗಳು. ಹಾಗೂ ಒಪ್ಪೋಸಮ್ ಗಳಿಗಿಂತ ಗಾತ್ರದಲ್ಲಿ ತುಸು ಸಣ್ಣವು. ಅಮೇರಿಕಾ ಖಂಡದ ಈ ಒಪ್ಪೋಸಮ್ ಗಳು ಕ್ರಿಶ ಹದಿನಾರನೇ ಶತಮಾನದಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಯಾತ್ರಿಕರ ಕಣ್ಣಿಗೆ ಬಿದ್ದವು.
1608 ರಲ್ಲಿ ದ ಅಮೇರಿಕಕ್ಕೆ ಕಾಲಿಟ್ಟ ಜಾನ್ ಸ್ಮಿತ್ ಎಂಬ ಇಂಗ್ಲೀಷ್ ಪಯಣಿಗ ಈ ಜೀವಿಯನ್ನ ಮೊದಲ ಬಾರಿಗೆ ಅಲ್ಲಿನ ಕಾಡು ಜನರ ಭಾಷೆಯನ್ವಯ ಒಪ್ಪೋಸಮ್ ಎಂದು ತಿದ್ದಿ ಬರೆದ. ಈ ಒಪ್ಪೋಸಮ್ ಗಳು ಸಂಕೋಚ ಸ್ವಭಾವದ ಜೀವಿಗಳಾದರೂ ಅವು ಇತರೆ ಚಿಕ್ಕ ಪುಟ್ಟ ಜೀವಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ತವೆ. ಹಾಗೂ ಇವುಗಳ ಇನ್ನೊಂದು ವಿಶೇಷತೆಯೆಂದರೆ ಇವು ತಾವು ವಾಸಿಸುವ ಕಾಡಿನ ಪ್ರದೇಶವನ್ನ ಕ್ರಿಮಿ ಕೀಟಗಳಿಂದ ಸ್ವಚ್ಛವಾಗಿರಿಸುತ್ತವೆ. ಕ್ರಿಮಿ ಕೀಟ ಉಣ್ಣೆಗಳು ಹಾಗೂ ಇತರೆ ಪೆಸ್ಟ್ ಗಳೆ ಇವುಗಳ ಪ್ರಾಥಮಿಕ ಆಹಾರವಾಗಿರುವುದರಿಂದ ಕ್ರಿಮಿಗಳನ್ನ ಭಕ್ಷಿಸುವ ಇವು ನಿಸರ್ಗದ ಸ್ವಚ್ಛ ಕಾರ್ಮಿಕ ಜೀವಿಗಳೆನ್ನಬಹುದು.
ಇತರೆ ಜೀವಿಗಳಿಂದ ದಾಳಿಗೊಳಗಾದಾಗ ಅಥವಾ ಅಪಾಯಕ್ಕೊಳಗಾದಾಗ ಇವು ಸತ್ತಂತೆ ನಟಿಸುತ್ತವೆ. ಹಾಗೂ ಆ ಅವಸ್ಥೆಯಲ್ಲಿ ಒಂದು ಬಗೆಯ ದುರ್ಗಂಧವನ್ನೂ ಸಹ ಸ್ರವಿಸಿ ಜೀವಿಗಳಿಂದ ರಕ್ಷಿಸಿಕೊಳ್ಳುತ್ತವೆ. ಈ ಕ್ರಿಯೆಯು ನಿಸರ್ಗವೆ ಇವುಗಳಿಗೆ ಈ ದೀರ್ಘ ವಿಕಾಸದ ಹಾದಿಯಲ್ಲಿ ಕಲಿಸಿಕೊಟ್ಟ ಪಾಠವೆನ್ನಬಹುದು. ಇವುಗಳಿಗೆ ಇಂಥದ್ದೆ ಆಹಾರ ಬೇಕೆಂದೇನಿಲ್ಲ. ಇವು ಬದುಕಿರುವ ಸಣ್ಣ ಪುಟ್ಟ ಜೀವಿಗಳಿಂದ ಹಿಡಿದು ಸತ್ತ ಕೊಳೆತ ವಸ್ತು ಮಾಂಸ ಎಲ್ಲವನ್ನೂ ಸಹ ಭಕ್ಷಿಸುತ್ತವೆ. ಬಹುಶಃ ಈ ಸರ್ವಭಕ್ಷಕ ಗುಣವೇ ಇವುಗಳನ್ನ ಈವರೆಗು ಬದುಕಿಸುತ್ತಾ ಬಂದಿದ್ದಿರಬೇಕು.
ಇದರ ಹೆಣ್ಣು ಜಾತಿಯನ್ನ ಜಿಲ್ಸ್ (jills) ಎಂದೂ.. ಗಂಡುಗಳನ್ನ ಜಾಕ್ಸ್ (jacks) ಎಂದೂ ಕರೆಯಲಾಗುತ್ತದೆ. ಹಾಗೂ ಬೇಬಿಗಳನ್ನ ಜೋಯ್ ಗಳೆನ್ನಲಾಗುತ್ತದೆ (joeys). ಇವುಗಳಿಗೆ ಇತರೆ ಸಸ್ತನಿಗಳಿಗಿಂತ ಚುರುಕಾದ ಇಂದ್ರಿಯ ಶಕ್ತಿಯಿದ್ದು. ಇವುಗಳ ಗ್ರಹಿಕಾ ಬಲದಿಂದ ಹತ್ತಿರವಾಗುವ ಎಲ್ಲಾ ವಿಧದ ಅಪಾಯಗಳನ್ನ ಇವು ಕೂಡಲೆ ಗ್ರಹಿಸಿ ರಕ್ಷಿಸಿಕೊಳ್ಳಬಲ್ಲವು. ಮಿಲನದ ಅವಧಿಯಲ್ಲಿ ಹೆಣ್ಣು ಸ್ರವಿಸುವ ಒಂದು ಬಗೆಯ ವಾಸನಾ ಗ್ರಂಥಿಯನ್ನ ಗ್ರಹಿಸಿ ಗಂಡುಗಳು ಹುಡುಕಿ ಬರುತ್ತವೆ. ಹೆಣ್ಣು ಒಮ್ಮೆಲೆ ಇಪ್ಪತ್ತು ಮರಿಗಳನ್ನ ಹೆರುತ್ತದೆ. ಎರಡು ಅಥವಾ ಮೂರು ವಾರಗಳಲ್ಲಿ ಮರಿ ಹಾಕುವ ಹೆಣ್ಣು ಮರದ ಪೊಟರೆ ಅಥವಾ ಬಿಲಗಳಲ್ಲಿ ಮರಿಗಳನ್ನ ರಕ್ಷಿಸುತ್ತದೆ.
ಹುಟ್ಟಿದ ಮರಿಗಳು ಸಣ್ಣ ಗೋಡಂಬಿಯ ಗಾತ್ರದಲ್ಲಿರುತ್ತವೆ. ಅವುಗಳಲ್ಲಿ ತೆವಳುತ್ತಾ ಬಂದು ತಾಯಿಯ ಗರ್ಭ ಸೇರುವ ಮರಿಗಳು ಮಾತ್ರವೆ ಉಳಿಯುತ್ತವೆ. ಮಿಕ್ಕವು ಸ್ಪರ್ಧೆಯಲ್ಲಿ ಗೆಲ್ಲಲಾರದೆ ಸಾಯುತ್ತವೆ. ತಾಯಿ ಹೊಟ್ಟೆ ಚೀಲ ಸೇರಿದ ಮರಿಗಳು ಸುಮಾರು 70 – 120 ದಿನಗಳವರೆಗೆ ತಾಯಿಯ ಮಡಿಲಲ್ಲೆ ಬೆಳೆಯುತ್ತವೆ. ನಂತರ ಅವು ಸ್ವತಂತ್ರ. ಇವುಗಳ ಆಯಸ್ಸು ಹೆಚ್ಚೆಂದರೆ ನಾಲ್ಕು ವರ್ಷ. ವಿಷಕಾರಿ ಹಾವು ಅಥವಾ ಇತರೆ ವಿಷಕಾರಿಯಾದ ಯಾವ್ದೆ ಜೀವಿಯ ಕಡಿತಕ್ಕು ಈ ಸಸ್ತನಿಗಳು ಸಾಯುವುದಿಲ್ಲ. ಆ ವಿಷಕ್ಕೆ ಪ್ರತಿರೋಧಿಸಬಲ್ಲ ಪ್ರತಿರೋಧಕ ಶಕ್ತಿ ಅವುಗಳ ದೇಹದಲ್ಲಿ ನಿಸರ್ಗದತ್ತವಾಗಿಯೆ ಇರುತ್ತದೆ. ಹೆಣ್ಣು ತನ್ನ ಮರಿಗಳನ್ನ ಚೀಲದೊಳಗೆ ಮಾತ್ರವಲ್ಲದೆ ಬೆನ್ನ ಮೇಲು ಸಹ ಹೊತ್ತು ತಿರುಗಾಡುತ್ತದೆ. ಇವು ಅಮೇರಿಕಾದ ತಣ್ಣನೆಯ ಹವಾಮಾನದಲ್ಲಷ್ಟೇ ಅಲ್ಲದೆ ಇಂಗ್ಲೆಂಡ್ ಹಾಗೂ ಮೆಕ್ಸಿಕೊಗಳ ಉಷ್ಣ ಹವೆಗು ಸಹ ಒಗ್ಗಿಕೊಳ್ಳಬಲ್ಲ ರೆಸಿಸ್ಟನ್ಸ್ ಹೊಂದಿವೆ. ಇವು ಸಾಮಾನ್ಯವಾಗಿ 4-12 ಪೌಂಡ್ ಗಳಷ್ಟು ತೂಗುತ್ತವೆ. ಇವುಗಳ ಬಾಲ ಇವುಗಳ ಐದನೆ ಕೈಯಾಗಿ ಬಳಕೆಯಾಗುತ್ತದೆ. ಆ ಬಾಲದಿಂದ ಇವು ದೇಹದ ಉಷ್ಣತೆಯನ್ನ ಸರಿದೂಗಿಸಿಕೊಳ್ಳುತ್ತವೆ ಎನ್ನಲಾಗುತ್ತದೆ.
ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)
ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ