ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ‘ಸಂಪೂರ್ಣ ಸಾವಯವ ತಾಲೂಕು’ ಮಾಡುವ ನಿಟ್ಟಿನಲ್ಲಿ ಮತ್ತೊಂದು ದೃಢ ಹಾಗೂ ಮಹತ್ವದ ಹೆಜ್ಜೆ ಇಡಲಾಗಿದೆ. ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಪಾಂಡವಪುರ ನಗರ ಕ್ರೀಡಾಂಗಣದ ಮುಂಭಾಗ ಆಯೋಜಿಸಲಾಗಿದ್ದ ‘ಪಾಂಡವಪುರ ಸಾವಯವ ಸಂತೆ’ಯಲ್ಲಿ ಮೇಲುಕೋಟೆ ಶಾಸಕರಾದ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರು ಭಾಗವಹಿಸಿ, ತಾಲೂಕಿನ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನು ವೀಕ್ಷಿಸಿ ಸಂತೆಗೆ ಚಾಲನೆ ನೀಡಿದರು.
ತಿಂಗಳಿಗೆರಡಲ್ಲ, ಇನ್ಮುಂದೆ ಪ್ರತಿ ಸೋಮವಾರ ಸಾವಯವ ಸಂತೆ!: ಈ ಮೊದಲು ತಿಂಗಳಿಗೆ ಎರಡು ಸೋಮವಾರ ನಡೆಯುತ್ತಿದ್ದ ಸಾವಯವ ಸಂತೆಗೆ ಸಾರ್ವಜನಿಕರಿಂದ ಹಾಗೂ ರೈತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಸಾವಯವ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಮತ್ತು ಜಾಗೃತಿ ಮೂಡಿಸಲು ಇನ್ಮುಂದೆ ಪ್ರತಿ ಸೋಮವಾರ ಸಂತೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಮೊದಲ ವಾರ ಪಾಂಡವಪುರ ನಗರ ಕ್ರೀಡಾಂಗಣದ ಮುಂಭಾಗ, ಎರಡನೇ ವಾರ ಪಾಂಡವಪುರ ತಾಲೂಕು ಪಂಚಾಯಿತಿ ಆವರಣ; ಈ ರೀತಿ ಪರ್ಯಾಯವಾಗಿ ಪ್ರತಿ ಸೋಮವಾರ ಸಂತೆ ನಡೆಯಲಿದ್ದು, ನಾಗರಿಕರಿಗೆ ನಿರಂತರವಾಗಿ ವಿಷಮುಕ್ತ ಉತ್ಪನ್ನಗಳು ಲಭ್ಯವಾಗಲಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆ: ಸಾವಯವ ಸಂತೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಹೆಚ್ಚಿನ ಪ್ರಚಾರ ನೀಡಲಾಗುತ್ತಿದ್ದು, ಈ ಬಾರಿಯ ಸಂತೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ. ಯುವ ಜನಾಂಗದಲ್ಲಿ ಮಣ್ಣಿನ ರಕ್ಷಣೆ ಹಾಗೂ ಸಾವಯವ ಆಹಾರದ ಕುರಿತು ಜಾಗೃತಿ ಮೂಡುತ್ತಿರುವುದು ಶ್ಲಾಘನೀಯ ಎಂದು ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬಹುಮುಖ ಪ್ರಯೋಜನ: ಆರೋಗ್ಯ, ಆದಾಯ ಮತ್ತು ಮಣ್ಣಿನ ರಕ್ಷಣೆ: ಈ ವೇಳೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, “ಮೇಲುಕೋಟೆ ಕ್ಷೇತ್ರವನ್ನು ‘ಸಾವಯವ ತಾಲೂಕು’ ಎಂದು ಬರಿ ಘೋಷಣೆಗೆ ಸೀಮಿತಗೊಳಿಸದೆ, ಹಂತ-ಹಂತವಾಗಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವುದೇ ನಮ್ಮ ಗುರಿ. ಈ ಸಂತೆಯಿಂದ ಏಕಕಾಲಕ್ಕೆ ಹಲವು ಪ್ರಯೋಜನಗಳಿವೆ” ಎಂದರು.
• ರೈತರ ಆದಾಯದಲ್ಲಿ ಏರಿಕೆ: ಮಧ್ಯವರ್ತಿಗಳಿಲ್ಲದೆ ನೇರ ಮಾರುಕಟ್ಟೆ ಸಿಗುವುದರಿಂದ ಸಾವಯವ ರೈತರಿಗೆ ಸೂಕ್ತ ಬೆಲೆ ಲಭ್ಯ.
• ನಾಗರಿಕರ ಆರೋಗ್ಯ ರಕ್ಷಣೆ: ತಾಲೂಕಿನ ಸಮಸ್ತ ಜನತೆಗೆ ಕೀಟನಾಶಕರಹಿತ, ತಾಜಾ ಸಾವಯವ ಆಹಾರ ಲಭ್ಯತೆ.
• ಮಣ್ಣಿನ ಫಲವತ್ತತೆ ರಕ್ಷಣೆ: ರಾಸಾಯನಿಕ ಮುಕ್ತ ಕೃಷಿಯಿಂದ ನಮ್ಮ ನೆಲ ಮತ್ತು ಮಣ್ಣಿನ ಸತ್ವದ ಉಳಿವು.
ಮುಂಬರುವ ದಿನಗಳಲ್ಲಿ ಇನ್ನಷ್ಟು ಯೋಜನೆಗಳು: ಮುಂಬರುವ ದಿನಗಳಲ್ಲಿ ಈ ಸಾವಯವ ಸಂತೆಯನ್ನು ಇನ್ನಷ್ಟು ವಿಸ್ತರಿಸುವ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಹೊಸ ಮಾದರಿಯ ಯೋಜನೆ ಮತ್ತು ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪುಟ್ಟಣ್ಣಯ್ಯ ಫೌಂಡೇಶನ್ ಯೋಜಿಸಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆ ಕ್ಷೇತ್ರ ಸಾವಯವ ನಾಡಾಗುವತ್ತ ಇಡುತ್ತಿರುವ ಈ ದಿಟ್ಟ ನಡೆಗೆ ಇಡೀ ಜಿಲ್ಲೆಯಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.








