ಬೆಂಗಳೂರು : ತೋಟಗಾರಿಕಾ ಸಚಿವ ನಾರಾಯಣ ಗೌಡ, ಮಾತಿನ ಗಡಿಬಿಡಿಯಲ್ಲಿ ‘ನಮ್ಮ ಮುಖ್ಯಮಂತ್ರಿ ದಿನದ 14 ಗಂಟೆ ನಿದ್ದೆ ಮಾಡುತ್ತಾರೆ’ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಮಂಡ್ಯಕ್ಕೆ ಜೆಡಿಎಸ್ ನಿಂದ ಬಂದಿರುವ ನಾರಾಯಣ ಗೌಡ ಉಸ್ತುವಾರಿಯಾಗಿದ್ದಾರೆ. ಇದೀಗ ಹಾಸನಕ್ಕೂ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಗೋಪಾಲಯ್ಯಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಾರೆ. ಇದು ಜೆಡಿಎಸ್ ಕೋಟೆ ಛಿದ್ರಪಡಿಸುವ ತಂತ್ರವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾರಾಯಣಗೌಡ, ರಾಜ್ಯದಲ್ಲಿ ಜೆಡಿಎಸ್ ನ ಭದ್ರಕೋಟೆ ಒಡೆದು ಹೋಗಿದೆ. ಇನ್ಮುಂದೆ ನೀವೇ ನೋಡುತ್ತೀರಿ ಎಂದು ಮಾರ್ಮಿಕವಾಗಿ ನುಡಿದರು.
ಹಾಗೇ ಮುಂದುವರಿದು ಮಾತನಾಡುತ್ತಾ, ಮಾತಿನ ಗಡಿಬಿಡಿಯಲ್ಲಿ ನಮ್ಮ ಮುಖ್ಯಮಂತ್ರಿ ದಿನದ 14 ಗಂಟೆ ಕೆಲಸ ಮಾಡುತ್ತಾರೆ ಎನ್ನುವ ಬದಲು ನಿದ್ದೆ ಮಾಡುತ್ತಾರೆ ಎಂದು ಎಡವಟ್ಟು ಮಾಡಿಕೊಂಡರು. ಬಳಿಕ “ಸಿಎಂ ನಿದ್ದೆ ಮಾಡಲ್ಲ, ನಮಗೂ ಮಲಗಲು ಬಿಡುತ್ತಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ನಮ್ಮಿಂದ ಮಾಹಿತಿ ಪಡೆದು ಇಲಾಖೆಗಳ ಪರಿಶೀಲನೆ ಮಾಡಿ ಕೆಲಸ ಕಾರ್ಯ ನಡೆಸುತ್ತಿದ್ದಾರೆ. ಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ” ಎಂದು ತೇಪೆ ಹಚ್ಚಿದರು.
ಇದೇ ವೇಳೆ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೂ ಅನುಕೂಲವಾಗುವ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮಂಡ್ಯಕ್ಕೆ 18.5 ಕೋಟಿ ಅನುದಾನ ಕೊಟ್ಟಿದ್ದಾರೆ. ಬರೀ 2.5 ಕೋಟಿ ಮಾತ್ರ ವೆಚ್ಚವಾಗಿದೆ. ದಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡುತ್ತಿದ್ದಾರೆ ಎಂದು ಅನುದಾನ ನೀಡುತ್ತಿಲ್ಲ ಎನ್ನುವ ಆರೋಪವನ್ನು ತಳ್ಳಿಹಾಕಿದರು.








