ಚಿತ್ರದುರ್ಗ: ನಾವು ದರ್ಶನ್ ರನ್ನು ಭೇಟಿಯಾಗಿಲ್ಲ ಎಂದು ಕೊಲೆಯಾಗಿರುವ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ ಹೇಳಿದ್ದಾರೆ.
ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿದ್ದು, ಹಣ ಪಡೆದು ರಾಜಿಯಾಗಿದೆ. ಹೊಸ ಕಾರನ್ನು ಆ ಕುಟುಂಬ ಬುಕ್ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಈ ವೈರಲ್ ಸುದ್ದಿಗೆ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ನಾವು ದರ್ಶನ್ ಭೇಟಿಯಾಗಿಲ್ಲ, ಅವರು ಸಹ ನಮ್ಮನ್ನು ಭೇಟಿಯಾಗಿಲ್ಲ. ಅಲ್ಲದೇ ನಾವು ಯಾವುದೇ ಕಾರು ಖರೀದಿಸಿಲ್ಲ. ನಮಗೆ ಹಳೆಯ ಬೈಕ್ ರಿಪೇರಿ ಮಾಡಿಸಲು ಕೂಡ ದುಡ್ಡಿಲ್ಲ. ಶೆಡ್‌ಗೂ ಹೋಗಿಲ್ಲ, ಹಣವನ್ನೂ ಪಡೆದಿಲ್ಲ. ಆದರೆ ಫೇಸ್‌ಬುಕ್ಕೊ ಅಥವಾ ಫೇಕ್ ಬುಕ್ಕೊ ನಮಗೆ ಗೊತ್ತಿಲ್ಲ. ನಾವೆಲ್ಲರೂ ರೇಣುಕಾಸ್ವಾಮಿ ಸಾವಿಂದ ಸಾಕಷ್ಟು ನೊಂದಿದ್ದೇವೆ. ಈ ರೀತಿ ಯಾರೂ ಸುಳ್ಳು ಸುದ್ದಿ ಹಬ್ಬಬೇಡಿ ಎಂದು ಮನವಿ ಮಾಡಿದ್ದಾರೆ.
ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರದಿಂದ ಕೆಲಸ ನೀಡಲು ಸಾಧ್ಯವಿಲ್ಲವೆಂದು ನಮಗೆ ಹಿಂಬರಹ ಬಂದಿದೆ. ಇದು ಆಘಾತ ತಂದಿದೆ. ಹೀಗಾಗಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.