ಬೆಂಗಳೂರು : ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಶಕ್ತಿ ಮೀರಿ ಕ್ರಮ ತೆಗೆದುಕೊಳ್ಳಲು ನಾವು ಬದ್ಧವಾಗಿದ್ದೇವೆ. ಯಾವುದೇ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯಲ್ಲ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ವರಿಷ್ಠರನ್ನು ಭೇಟಿ ಆಗುವ ಬಗ್ಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿನ ಮಳೆ ಅನಾಹುತದ ಬಗ್ಗೆ ಕೇಂದ್ರದ ಜೊತೆ ಮಾತನಾಡುತ್ತೇನೆ. ದೆಹಲಿಗೆ ಹೋಗುವ ದಿನಾಂಕ ಫಿಕ್ಸ್ ಆಗಿಲ್ಲ. ನಿನ್ನೆ ಸಚಿವರ ಜೊತೆ ಸಭೆ ಮಾಡಿದ್ದೇನೆ. ಅಧಿವೇಶನದ ಸಂಬಂಧ ಚರ್ಚೆ ಮಾಡಿದ್ದೇನೆ. ನಾವು ದೆಹಲಿಗೆ ತೆರಳಿ ವಾಸ್ತವಾಂಶ ತಿಳಿಸುತ್ತೇವೆ. ಸದನದಲ್ಲಿ ವಾಸ್ತವಾಂಶ ಜನರ ಮುಂದಿಡುತ್ತೇವೆ. ಅತಿವೃಷ್ಟಿ ಪ್ರದೇಶಕ್ಕೆ ಮೂರು ತಂಡಗಳಲ್ಲಿ ಪ್ರವಾಸ ಮಾಡಲಾಗುತ್ತದೆ. ದೆಹಲಿಯಿಂದ ಬಂದಿರುವ ತಂಡ ಪ್ರವಾಸ ಮಾಡುತ್ತಿದೆ. ಅವರ ಜೊತೆ ನಮ್ಮ ಅಧಿಕಾರಿಗಳು ಇದ್ದಾರೆ. ಕಳೆದ ವರ್ಷ ಏನಾಗಿತ್ತು ಅದರ ಮಾಹಿತಿ ಕೊಟ್ಟಿದ್ದೇವೆ. ಕೇಂದ್ರದ ತಂಡ ಏನು ವರದಿ ಸಲ್ಲಿಸುತ್ತೆ ನೋಡೋಣ ಎಂದು ಹೇಳಿದರು.