ಲಂಕಾ ವಿರುದ್ಧ ಸರಣಿ ಗೆಲ್ಲುವುದು ನಮ್ಮ ಮುಖ್ಯ ಗುರಿ – ಶಿಖರ್ ಧವನ್
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಮೆಗಾ ಆಡಿಷನ್ ಗೆ ಕ್ಷಣಗಣನೇ ಶುರುವಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಶಿಖರ್ ಧವನ್ ಬಳಗ ರೆಡಿಯಾಗಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಅಂತಿಮ 11ರ ಬಳಗವನ್ನು ಆಯ್ಕೆ ಮಾಡಿದ್ರೂ ಇನ್ನೂ ಬಹಿರಂಗಪಡಿಸಿಲ್ಲ.
ಟೀಮ್ ಇಂಡಿಯಾದ ಹಂಗಾಮಿ ನಾಯಕ ಶಿಖರ್ ಧವನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೆ ಇದು ಕೂಡ ಟೆಸ್ಟಿಂಗ್ ಟೈಮ್. ನಾಯಕನಾಗಿ ಮೊದಲ ಬಾರಿ ಲಂಕಾ ಪ್ರವಾಸ ಮಾಡಿದ್ದ ರಾಹುಲ್ ದ್ರಾವಿಡ್ ಇದೀಗ ತಂಡದ ಕೋಚ್ ಆಗಿಯೂ ಲಂಕಾ ಟೂರ್ ನಲ್ಲಿದ್ದಾರೆ.
ಇನ್ನೊಂದೆಡೆ ಈ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾದಲ್ಲಿ ಹೊಸ ಆಟಗಾರರೇ ಜಾಸ್ತಿ ಇದ್ದಾರೆ. 20 ಆಟಗಾರರ ಪಟ್ಟಿಯಲ್ಲಿ ಆರು ಆಟಗಾರರು ಈ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಯಾಗೋದನ್ನು ಎದುರು ನೋಡುತ್ತಿದ್ದಾರೆ.
ತಂಡದ ಹಿರಿಯ ಆಟಗಾರರು ಅಂದ್ರೆ ಶಿಖರ್ ಧವನ್, ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್. ಇನ್ನುಳಿದವರು ಎಲ್ಲಾ ಯುವ ಆಟಗಾರರೇ.
ಅಷ್ಟೇ ಅಲ್ಲ, ಈ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯು ಯುವ ಆಟಗಾರರಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಸರಣಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ತಂಡದ ಅಂತಿಮ 11ರ ಬಳಗವನ್ನು ನಾವು ಅಂತಿಮಗೊಳಿಸಿದ್ದೇವೆ. ಹಾಗೇ ಆರಂಭಿಕ ಆಟಗಾರನಾಗಿ ನನ್ನ ಜೊತೆ ಯಾರು ಇನಿಂಗ್ಸ್ ಆರಂಭಿಸುತ್ತಾರೆ ಅನ್ನೋದನ್ನು ನಿರ್ಧರಿಸಿದ್ದೇವೆ. ಅದನ್ನು ನಾವು ಪಂದ್ಯಕ್ಕೂ ಮುನ್ನ ಬಹಿರಂಗಗೊಳಿಸುತ್ತೇವೆ ಎಂದು ಶಿಖರ್ ಧವನ್ ಹೇಳಿದ್ದಾರೆ.
ಇನ್ನು ಈ ಸರಣಿ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ತಂಡದ ಆಯ್ಕೆಗೆ ಮಾನದಂಡವಾಗಲಿದೆ. ಹಾಗಂತ ಈ ಕುರಿತು ನನ್ನ ಬಳಿ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿಯವರು ಚರ್ಚೆ ನಡೆಸಿಲ್ಲ. ಆದ್ರೆ ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್ ಮೆಂಟ್ ರಾಹುಲ್ ದ್ರಾವಿಡ್ ಜೊತೆ ಚರ್ಚೆ ನಡೆಸಿರುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ ಎಂದು ಧವನ್ ಹೇಳಿದ್ದಾರೆ.
ಹಾಗೇ ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯೂ ಭಿನ್ನ ವಿಭಿನ್ನವಾಗಿದೆ. ರಾಹುಲ್ ದ್ರಾವಿಡ್ ಕೂಲ್ ಆಗಿಯೇ ತಂತ್ರಗಳನ್ನು ರೂಪಿಸುತ್ತಾರೆ. ಹಾಗೇ ರವಿಶಾಸ್ತ್ರಿಯವರು ಅವರದ್ದೇ ಶೈಲಿಯಲ್ಲಿ ತಂತ್ರಗಳನ್ನು ರೂಪಿಸಿಕೊಳ್ಳುತ್ತಾರೆ ಎಂದು ಧವನ್ ಹೇಳಿದ್ದಾರೆ.
ಇನ್ನೊಂದೆಡೆ ಸರಣಿ ಗೆಲ್ಲುವುದು ನಮ್ಮ ಮುಖ್ಯ ಗುರಿಯಾಗಿದೆ. ಜೊತೆಗೆ ಎಲ್ಲ ರೀತಿಯ ಪ್ರಯೋಗಗಳನ್ನು ಮಾಡಲಾಗುವುದು. ಹಾಗಂತ ಎಲ್ಲಾ ಆಟಗಾರರಿಗೂ ಅವಕಾಶ ನೀಡಲೇಬೇಕು ಎಂಬ ನಿಯಮಗಳು ಇಲ್ಲ. ಅವಕಾಶವಂತೂ ಇದ್ದೇ ಇದೆ ಎಂಬ ಅಭಿಪ್ರಾಯವನ್ನು ಶಿಖರ್ ಧವನ್ ವ್ಯಕ್ತಪಡಿಸಿದ್ದಾರೆ.