ನವದೆಹಲಿ: ಎನ್ ಡಿಎ ವಿರುದ್ಧ ಈ ಬಾರಿ ಇಂಡಿಯಾ ಒಕ್ಕೂಟ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಪ್ರಧಾನಿ ಉತ್ತರಾಧಿಕಾರಿಯಾಗಲು ರಾಹುಲ್ ಗಾಂಧಿ ಅವರನ್ನು ಬೆಂಬಲಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಒಕ್ಕೂಟ ((INDIA Block)) ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗವವರು ಯಾರು ಎಂಬುವುದರ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಸ್ಪರ್ಧೆಗೂ ಅವರು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಚುನಾವಣೆಗೆ ಮುನ್ನ ಎರಡು ಭಾರತ್ ಜೋಡೋ ಯಾತ್ರೆಗಳನ್ನ ನಡೆಸಿದ್ದಾರೆ. ಮಿತ್ರ ಪಕ್ಷಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡಿದ್ದಾರೆ. ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಗೆ ಜನಪ್ರಿಯ ಆಯ್ಕೆ ಎಂದರೆ ರಾಹುಲ್ ಗಾಂಧಿ ಎಂದು ಹೇಳಿದ್ದಾರೆ.
ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆಯಾಗಿದ್ದಾರೆ. ಏಕೆಂದರೆ ರಾಹುಲ್ ಗಾಂಧಿ ಕಾಂಗ್ರೆಸ್‌ನ ಬಾಸ್. ಯುವಸಮೂಹವನ್ನು ಪ್ರತಿನಿಧಿಸುತ್ತಾರೆ. ದೇಶದ ಆಳ-ಅಗಲ ಅರಿತವರು. ಇಂಡಿಯಾ ಕೂಟದ ಅನೇಕರು ಕೂಡ ರಾಹುಲ್ ಅವರನ್ನು ಒಪ್ಪಿದ್ದಾರೆ. ಆದರೆ, ಅಧಿಕೃತ ಘೋಷಣೆ ಮಾತ್ರ ಆಗಿಲ್ಲ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ (Rahul Gandhi) ಹಾಗೂ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸುವ ಕುರಿತು ಮಾತುಕತೆ ನಡೆದಿತ್ತು. ಆದರೆ, ಪ್ರಿಯಾಂಕಾ ಗಾಂಧಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.